ಲಕ್ನೋ: ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಭಾನುವಾರ ಪ್ರತಿಭಟನಾಕಾರ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 8 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ತಡರಾತ್ರಿ ಭೇಟಿ ನೀಡಿದರು. ಈ ವೇಳೆ ಪೊಲೀಸರು ಅಲ್ಲಿಗೆ ಹೋಗುವುದನ್ನು ತಡೆಯಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜ್ಯದಲ್ಲಿ ಕೃಷಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳನ್ನು ಭೇಟಿ ಮಾಡಿದರು. ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಸೀತಾಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸೀತಾಪುರದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ತಡೆದು ನಿಲ್ಲಿಸಿ ಸುತ್ತುವರಿದಾಗ, ಅವರೊಂದಿಗೆ ವಾಗ್ವಾದಕ್ಕಿಳಿದ ಪ್ರಿಯಾಂಕಾ “ನೀವು ಕೊಂದ ಜನರಿಗಿಂತ ನಾನು ಮುಖ್ಯಳಲ್ಲ. ನೀವು ಸರ್ಕಾರವನ್ನು ರಕ್ಷಿಸುತ್ತಿದ್ದೀರಿ. ನೀವು ನನಗೆ ಕಾನೂನು ವಾರಂಟ್, ಕಾನೂನು ಆಧಾರವನ್ನು ನೀಡಿ, ಇಲ್ಲದಿದ್ದರೆ ನಾನು ಇಲ್ಲಿಂದ ಕದಲುವುದಿಲ್ಲ ಮತ್ತು ನೀವು ನನ್ನನ್ನು ಮುಟ್ಟುಲಾಗುವುದಿಲ್ಲ” ಎಂದು ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳುತ್ತಿದೆ.
ಇದನ್ನೂ ಓದಿ:ಕೋವಿಡ್ ಕಡಿಮೆಯಾದರೂ ಇಳಿದಿಲ್ಲ ರೈಲ್ವೇ ಪ್ಲಾಟ್‌ಫಾರಂ ಪ್ರವೇಶ ಶುಲ್ಕ!
“ನೀವು ನನ್ನನ್ನು ಕಾರಿನಲ್ಲಿ ಕೂರಿಸಿದರೆ ನಾನು ನಿಮ್ಮ ಅಪಹರಣದ ಆರೋಪ ಹೊರಿಸುತ್ತೇನೆ. ಮತ್ತು ಆರೋಪವು ಪೊಲೀಸರ ಮೇಲೆ ಆಗುವುದಿಲ್ಲ, ಆದರೆ ನಿಮ್ಮ ಮೇಲೆ ಮಾಡುತ್ತೇನೆ” ಎಂದು ಪ್ರಿಯಾಂಕಾ ಗಾಂಧಿ ಪೋಲೀಸ್ ಅಧಿಕಾರಿಯೊಬ್ಬರಿಗೆ ಹೇಳಿದ್ದಾರೆ.
ಈ ಸಮಯದಲ್ಲಿ ಆಕೆಯ ಪಕ್ಕದಲ್ಲಿ ನಿಂತಿದ್ದ ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ, “ ನೀವು ಹೇಗೆ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಕೈ ಎತ್ತುವಿರಿ” ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಆದರೆ ನಿಜವಾಗಿಯೂ ಸ್ಥಳದಲ್ಲಿ ಏನಾಗಿದೆ ಅಥವಾ ಕಾಂಗ್ರೆಸ್ ನಾಯಕಿಯ ಮೇಲೆ ಹಲ್ಲೆ ಯತ್ನವಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಆಗಿದ್ದೇನು?: ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರು ಪ್ರತಿಭಟನಾಕಾರರ ಮೇಲೆಯೇ ಕಾರು ಚಲಾಯಿಸಿದ್ದು, ನಾಲ್ವರು ರೈತರು ಸ್ಥಳದಲ್ಲೇ ಅಸುನೀಗಿದ್ದಾಗಿ ರೈತರು ಆರೋಪಿಸಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಅನ್ನದಾತರು, ಅಲ್ಲಿದ್ದ 3 ಕಾರುಗಳಿಗೆ (ಮಿಶ್ರಾರದ್ದೂ ಸೇರಿ) ಬೆಂಕಿ ಹಚ್ಚಿದ್ದು, ಹಿಂಸಾಚಾರ ಭುಗಿಲೆದ್ದಿದೆ.
ಪುತ್ರ ಸ್ಥಳದಲ್ಲಿರಲಿಲ್ಲ ಎಂದ ಸಚಿವ: ಇದೇ ವೇಳೆ, “ಘಟನೆ ವೇಳೆ ನನ್ನ ಪುತ್ರ ಆ ಸ್ಥಳದಲ್ಲೇ ಇರಲಿಲ್ಲ. ಅದಕ್ಕೆ ನನ್ನಲ್ಲಿ ವಿಡಿಯೋ ಸಾಕ್ಷ್ಯವಿದೆ. ಬಿಜೆಪಿ ಕಾರ್ಯಕರ್ತರ ಕಾರಿನ ಮೇಲೆ ರೈತರು ಕಲ್ಲುತೂರಾಟ ನಡೆಸಿದ್ದರಿಂದ, ಕಾರು ಪಲ್ಟಿಯಾಯಿತು. ಈ ವೇಳೆ ಇಬ್ಬರು ಸಾವಿಗೀಡಾದರು. ನಂತರ ರೈತರು ಕಾರಿನಲ್ಲಿದ್ದ ನಮ್ಮ ಪಕ್ಷದ ಮೂವರು ಕಾರ್ಯಕರ್ತರು ಹಾಗೂ ಚಾಲಕನಿಗೆ ಥಳಿಸಿ ಕೊಂದುಹಾಕಿದ್ದಾರೆ’ ಎಂದು ಕೇಂದ್ರ ಸಚಿವ ಮಿಶ್ರಾ ಆರೋಪಿಸಿದ್ದಾರೆ.
ರೈತರ ವಾದವೇನು?: ಇತ್ತೀಚೆಗೆ ಭಾಷಣವೊಂದರಲ್ಲಿ ಕೇಂದ್ರ ಸಚಿವ ಮಿಶ್ರಾ ಅವರು, ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಕುರಿತು ಪ್ರಸ್ತಾಪಿಸಿ, “ಇದು 10-15 ಜನರು ನಡೆಸುತ್ತಿರುವ ಪ್ರತಿಭಟನೆಯಾಗಿದ್ದು, ಅವರನ್ನು ಸರಿದಾರಿಗೆ ತರಲು ನಮಗೆ ಕೇವಲ 2 ನಿಮಿಷ ಸಾಕು’ ಎಂದು ಹೇಳಿದ್ದರು. ಈ ಹಿನ್ನೆಲೆ ಯಲ್ಲಿ ಆಕ್ರೋಶಗೊಂಡಿದ್ದ ರೈತರು, ಮಿಶ್ರಾ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದರು.
ಭಾನುವಾರ ಮಿಶ್ರಾ ಅವರ ಸ್ವಗ್ರಾಮ ಟಿಕುನಿಯಾದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಇಲ್ಲಿಗೆ ಉತ್ತರ ಪ್ರದೇಶ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಕೂಡ ಆಗಮಿಸುವವರಿದ್ದರು. ಅಲ್ಲಿಗೆ ಬರುವ ಮೌರ್ಯ ಅವರಿಗೆ ಕಪ್ಪುಬಾವುಟ ಪ್ರದರ್ಶಿಸಲು ರೈತರು ಸಿದ್ಧತೆನಡೆಸಿದ್ದರು. ಈ ವೇಳೆ, ಅಲ್ಲಿಗೆ ಬಂದ ಮೂರು ಕಾರುಗಳು ಏಕಾಏಕಿ ರೈತರ ಮೇಲೆಯೇ ಹಾದುಹೋದವು. ಘಟನೆಯಲ್ಲಿ ನಾಲ್ವರು ರೈತರು ಕೊನೆಯುಸಿರೆಳೆದರು ಎಂದು ರೈತ ಸಂಘಟನೆಯ ನಾಯಕ ತೇಜೀಂದರ್ ಎಸ್. ವಿರಾಕ್ ಹೇಳಿದ್ದಾರೆ. ಜತೆಗೆ, ಮೃತರಲ್ಲಿ ಒಬ್ಬ ರೈತನನ್ನು ಆಶಿಷ್ ಮಿಶ್ರಾ ಗುಂಡು ಹಾರಿಸಿ ಕೊಂದಿದ್ದಾಗಿಯೂ ಆರೋಪಿಸಿದ್ದಾರೆ.