ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಗೆ ಇನ್ನು ಎರಡೇ ತಿಂಗಳಿರುವಾಗ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಎಂಟ್ರಿ ನಡೆದಿರುವುದು ಕಾಂಗ್ರೆಸ್ ವಂಶಾಡಳಿತೆ, ರಾಹುಲ್ ಗಾಂಧಿ ವೈಫಲ್ಯ ಮತು ರಾಬರ್ಟ್ ವಾದ್ರಾ ಅವರ ಶೀಘ್ರ ರಾಜಕೀಯ ಪ್ರವೇಶಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಮಾತ್ರವೇ ಅಧ್ಯಕ್ಷರಾಗಲು ಸಾಧ್ಯ; ಬೇರೆ ಯಾರೂ ಅಲ್ಲ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶ ರಾಜಕಾರಣಕ್ಕೆ ತಂದಿರುವುದರಿಂದಾಗಲೀ, ದೇಶದ ಒಟ್ಟಾರೆ ರಾಜಕಾರಣದ ಮೇಲಾಗಲೀ, ಯಾವುದೇ ಪರಿಣಾಮ ಇರುವುದಿಲ್ಲ ಎಂದು ಪಾತ್ರ ಹೇಳಿದರು.
ಪ್ರಿಯಾಂಕಾ ಗಾಂಧಿ ಅವರು ತನ್ನ ತಾಯಿ ಸೋನಿಯಾ ಗಾಂಧಿ ಅನಾರೋಗ್ಯದಿಂದಾಗಿ ತೆರವುಗೊಳಿಸುವ ರಾಯ್ ಬರೇಲಿ ಕ್ಷೇತ್ರದಿಂದ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 46 ಸಂಸತ್ ಕ್ಷೇತ್ರಗಳಲ್ಲಿ ಪ್ರಚಾರಾಭಿಯಾನ ನಡೆಸಿದ್ದರು. ಆದರೆ ಕಾಂಗ್ರೆಸ್ ಈ ಪೈಕಿ ಗೆದ್ದದ್ದು ಎರಡು ಸೀಟಗಳನ್ನು ಮಾತ್ರ. ಪ್ರಿಯಾಂಕಾ ಅವರನ್ನು ಉತ್ತರ ಪ್ರದೇಶದ ಕಾಂಗ್ರೆಸ್ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿರುವುದು ವಂಶ ರಾಜಕಾರಣದಲ್ಲಿ ನಂಬಿಕೆ ಇರುವ ಪಕ್ಷದ ಪದಾಧಿಕಾರಿಗಳ ಮೇಲೆ ಮಾತ್ರವೇ ಪ್ರಭಾವ ಬೀರಬಹುದು ಎಂದು ಪಾತ್ರ ಹೇಳಿದರು.