ನವದೆಹಲಿ: ಗಾಂಧಿ ಕುಟುಂಬದ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಕೀಯದ ಅಖಾಡ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಕ್ಕೆ ಕೊನೆಗೂ ತೆರೆಬಿದ್ದಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಿಯಾಂಕಾ ಗಾಂಧಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಹುಲ್ ಗಾಂಧಿ ನೇಮಕ ಮಾಡಿ, ಉತ್ತರಪ್ರದೇಶದ ಹೊಣೆಗಾರಿಕೆ ವಹಿಸಿದ್ದಾರೆ ಎಂದು ವರದಿ ತಿಳಿಸಿದೆ.
2019ರ ಫೆಬ್ರುವರಿ ಮೊದಲ ವಾರದಲ್ಲಿ ಪ್ರಿಯಾಂಕಾ ಗಾಂಧಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಈ ಮೂಲಕ ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟಂತಾಗಿದೆ.
ಅಷ್ಟೇ ಅಲ್ಲದೇ ಗಾಂಧಿ ಕುಟುಂಬ ನಿರಂತರವಾಗಿ ಸ್ಪರ್ಧಿಸುತ್ತ ಬಂದಿದ್ದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಈ ಕ್ಷೇತ್ರವನ್ನು ತಾಯಿ, ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸೋನಿಯಾ ಈ ಬಾರಿ ರಾಯ್ ಬರೇಲಿಯಲ್ಲಿ ಸ್ಪರ್ಧಿಸುವುದು ಅನುಮಾನ ಎಂದು ಹೇಳಲಾಗುತ್ತಿತ್ತು.
ಪ್ರಿಯಾಂಕಾಜೀಗೆ ಹೊಣೆಗಾರಿಕೆ ನೀಡುವುದು ತುಂಬಾ ಮುಖ್ಯವಾಗಿತ್ತು. ಇದು ಕೇವಲ ಉತ್ತರಪ್ರದೇಶ ಪೂರ್ವ ಪ್ರದೇಶದಲ್ಲಿ ಮಾತ್ರವಲ್ಲ, ದೇಶದ ಇತರ ಭಾಗದಲ್ಲಿಯೂ ಪರಿಣಾಮ ಬೀರಲಿದೆ ಎಂದು ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಮೋತಿಲಾಲ್ ವೋಹ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.