ಹೊಸದಿಲ್ಲಿ: ಶ್ರೀ ರಾಮ ಎಲ್ಲರಲ್ಲೂ-ಎಲ್ಲರೊಂದಿಗೂ ಇದ್ದಾನೆ. ಅಯೋಧ್ಯೆಯಲ್ಲಿ ನಾಳೆ (ಬುಧವಾರ) ನಡೆಯಲಿರುವ ಮಂದಿರ ಭೂಮಿ ಪೂಜೆ ಸಮಾರಂಭ ರಾಷ್ಟ್ರೀಯ ಏಕತೆ, ಭಾತೃತ್ವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ದಾರಿಯಾಗಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶುಭ ನುಡಿದಿದ್ದಾರೆ.
ರಾಮ ಮಂದಿರ ಶಿಲಾನ್ಯಾಸದ ಕುರಿತು ಟ್ವೀಟ್ ಮಾಡಿರುವ ಅವರು ರಾಮ ಸರಳತೆ, ಸಾಹಸ, ಸಂಯಮ, ತ್ಯಾಗ, ವಚನ ಬದ್ಧತೆ, ದೀನಬಂಧು ಎಂದು ಹೇಳಿದ್ದಾನೆ.
ರಾಮಾಯಣವು ವಿಶ್ವದ ನಾಗರಿಕತೆ ಮತ್ತು ಭಾರತೀಯ ಉಪಖಂಡದ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಪುರಾಣ ಕಾಲದಲ್ಲಿ ರಾಮನು ಉಪಖಂಡಕ್ಕೆ ಸಹಾಯ ಮಾಡಿದ್ದಾನೆ. ಹೀಗಾಗಿ ರಾಮ ಪ್ರತಿಯೊಬ್ಬರಿಗೂ ಸೇರಿದ್ದಾಗಿದ್ದು, ಪ್ರತಿಯೊಬ್ಬರ ಕಲ್ಯಾಣವನ್ನು ಬಯಸುತ್ತಾರೆ. ಅದಕ್ಕಾಗಿಯೇ ಅವರನ್ನು ಮರ್ಯಾದ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಭಗವಾನ್ ರಾಮ, ಸೀತಾ ಮಾತೆ ಮತ್ತು ರಾಮಾಯಣದ ಕಥೆ ಸಾವಿರಾರು ವರ್ಷಗಳಿಂದ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆನಪುಗಳಲ್ಲಿ ಬೆಳಗಿದೆ. ಭಾರತೀಯರು ರಾಮಾಯಣ, ಧರ್ಮ, ನೀತಿ, ಕರ್ತವ್ಯ, ತ್ಯಾಗ, ಭವ್ಯ, ಪ್ರೀತಿ, ಶೌರ್ಯ ಮತ್ತು ಸೇವೆಯಿಂದ ಪ್ರೇರಿತರಾಗಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಗವಾನ್ ರಾಮ ಹಾಗೂ ಸೀತಾ ಮಾತೆಯ ಸಂದೇಶ ಹಾಗೂ ಕೃಪೆಯೊಂದಿಗೆ ರಾಮಲಲ್ಲಾದಲ್ಲಿ ನಡೆಯುತ್ತಿರುವ ಭೂಮಿ ಪೂಜೆ ರಾಷ್ಟ್ರೀಯ ಏಕತೆ, ಬಂಧುತ್ವ ಹಾಗೂ ಸಂಸ್ಕೃತಿಕ ಸಮಾಗಮದ ವೇದಿಕೆಯಾಗಲಿ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಚಿನ್ಹೆ ಇರುವ ಪತ್ರವನ್ನು ಟ್ವೀಟ್ ಮಾಡಿರುವ ಅವರು ಪತ್ರದ ಕಡೆಗೆ ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ. ಅವರು ಟ್ವೀಟ್ ಮಾಡಿರುವ ಪತ್ರ ಹಿಂದಿಯಲ್ಲಿದೆ.
ನವೆಂಬರ್‌ನಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿತ್ತು. ಇದೀಗ ಟ್ವೀಟ್ ಮಾಡುವ ಮೂಲಕ ದೇಶದ ಗಮನವನ್ನು ಸೆಳೆದಿದ್ದಾರೆ. ಈ ಸಮಾರಂಭ ಕೊರೊನಾ ಸಂದರ್ಭ ನಡೆಯುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪರ-ವಿರೋಧ ಹೇಳಿಕೆ ವ್ಯಕ್ತವಾಗುತ್ತಿದೆ. ಆದರೆ ಕಾಂಗ್ರೆಸ್‌ನ ಕೇಂದ್ರ ಮಟ್ಟದ ನಾಯಕರು ಯಾವುದೇ ವಿರೋಧ ಹೇಳಿಕೆಗಳನ್ನು ನೀಡಿಲ್ಲ. ಇದೀಗ ಪ್ರಿಯಾಂಕಾ ಗಾಂಧಿ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ಶುಭಕೋರುವ ಮೂಲಕ ಬೆಂಬಲ ಸೂಚಿಸಿದ್ದಾರೆ.