Advertisement

ಪೊಲೀಸರು ಕುತ್ತಿಗೆ ಹಿಡಿದು ತಳ್ಳಿದರು: ಪ್ರಿಯಾಂಕಾ ಆರೋಪ

09:53 AM Dec 29, 2019 | Team Udayavani |

ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಬಂಧಿತರಾದವರನ್ನು ಭೇಟಿ ಯಾಗಲು ಮೀರತ್‌ಗೆ ತೆರಳುತ್ತಿದ್ದ ವೇಳೆ ಪೊಲೀಸರು ನನ್ನೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಮಾಡಿದ್ದಾರೆ.

Advertisement

“ನನ್ನನ್ನು ದಾರಿ ಮಧ್ಯೆ ತಡೆಯಲಾಯಿತು. ಪೊಲೀಸರು ನನ್ನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು, ಹಿಂದಕ್ಕೆ ತಳ್ಳಿದರು. ಹೀಗಾಗಿ ನಾನು ಕೆಳಕ್ಕೆ ಬಿದ್ದೆ. ಕೊನೆಗೆ ನಾನು ಪಕ್ಷದ ಸದಸ್ಯರೊಬ್ಬರ ದ್ವಿಚಕ್ರ ವಾಹನದ ಮೂಲಕ ಸಂತ್ರಸ್ತರ ಮನೆ ತಲುಪಿದೆ’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

ನಿವೃತ್ತ ಐಪಿಎಸ್‌ ಅಧಿಕಾರಿ ಎಸ್‌.ಆರ್‌. ದರಾಪುರಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತ ಸದಾಫ್ ಜಫಾರ್‌ರನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದು, ಅವರ ಕುಟುಂಬ ಸದಸ್ಯರನ್ನು ಪ್ರಿಯಾಂಕಾ ಶನಿವಾರ ಭೇಟಿಯಾಗಿದ್ದಾರೆ.

ಮುಂದುವರಿದ ಪ್ರತಿಭಟನೆ: ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳು ಶನಿವಾರವೂ ಮುಂದು ವರಿದಿದ್ದು, ತಮಿಳುನಾಡು, ಕೇರಳ ಸಹಿತ ಹಲವೆಡೆ ರ್ಯಾಲಿಗಳು ನಡೆದಿವೆ. ಕೇರಳದಲ್ಲಿ ಕಾಂಗ್ರೆಸ್‌ ವತಿಯಿಂದ “ಮಹಾ ರ್ಯಾಲಿ’ ನಡೆಸಿ, ರಾಜಭವನ ದತ್ತ ಪಾದಯಾತ್ರೆ ನಡೆಸಲಾಯಿತು.

ಎಸ್‌ಪಿ ವಿವಾದ: ಉ.ಪ್ರ.ದ ಮೀರತ್‌ನ ಎಸ್‌ಪಿ ಯೊಬ್ಬರು, ಪ್ರತಿಭಟನಕಾರರಿಗೆ “ಪಾಕಿಸ್ಥಾನಕ್ಕೆ ಹೋಗಿ’ ಎಂದಿರುವ ವೀಡಿಯೋ ಬಹಿರಂಗವಾ ಗಿದ್ದು, ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯು ಸರಕಾರಿ ಸಂಸ್ಥೆಗಳಲ್ಲೂ ಕೋಮುವಾದದ ವಿಷ ಬಿತ್ತುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ಅಖೀಲೇಶ್‌ ನಾರಾಯಣ್‌ ಸಿಂಗ್‌, “ಪ್ರತಿಭಟನಾಕಾರರು ಪಾಕ್‌ ಪರ ಘೋಷಣೆ ಕೂಗಿದ್ದಕ್ಕೆ ನಾನು ಆ ರೀತಿ ಹೇಳಿದ್ದೆ’ ಎಂದಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಸತ್ತಿದ್ದು ಒಬ್ಬನೇ ಒಬ್ಬ ಪ್ರತಿಭಟನಕಾರ ಮಾತ್ರ. ಪ್ರತಿಭಟನಕಾರರನ್ನು ಕೆಲವರು ತಮ್ಮದೇ ಅಕ್ರಮ ಶಸ್ತ್ರಾಸ್ತ್ರಗಳ ಮೂಲಕ ಗುಂಡು ಹಾರಿಸಿದ ಪರಿಣಾಮ, ಉಳಿದವರು ಮೃತಪಟ್ಟಿರಬಹುದು ಎಂದು ಡಿಜಿಪಿ ಓಂ ಪ್ರಕಾಶ್‌ ಸಿಂಗ್‌ ಹೇಳಿದ್ದಾರೆ.

Advertisement

ವಿನೂತನ ಪ್ರತಿಭಟನೆ: ಕೇರಳದ ವಿದ್ಯಾರ್ಥಿಗಳ ಗುಂಪೊಂದು ವಿನೂತನ ರೀತಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕೊಳಂಚೇರಿಯ ಮಾಥೋಮಾ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಹಿನ್ನೆಲೆ ಯಲ್ಲಿ ನಡೆದ ಪ್ರಾರ್ಥನೆ ವೇಳೆ ಈ ಮಕ್ಕಳು ತಲೆಗೆ ಮುಸ್ಲಿಮರು ಧರಿಸುವ ಟೋಪಿ ಹಾಗೂ ಶಾಲು ಧರಿಸಿಕೊಂಡು ಕ್ರಿಸ್ಮಸ್‌ ಕೆರೋಲ್‌ ಹಾಡಿದ್ದಾರೆ. ಈ ಫೋಟೋಗಳು ವೈರಲ್‌ ಆಗಿವೆ.

ರಾಹುಲ್‌ ಕಿಡಿ: ಅಸ್ಸಾಂನ ಗುವಾಹಾಟಿಯಲ್ಲಿ ಸಾರ್ವ ಜನಿಕ ರ್ಯಾಲಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪೌರತ್ವ ಕಾಯ್ದೆಯನ್ನು ವಿರೋಧಿ ಸಿದ್ದಲ್ಲದೆ, ಅಸ್ಸಾಂನ ಅಸ್ಮಿತೆ ಮತ್ತು ಸಂಸ್ಕೃತಿ ಮೇಲೆ ದಾಳಿ ನಡೆಸಲು ಕಾಂಗ್ರೆಸ್‌ ಬಿಡುವುದಿಲ್ಲ. ಬಿಜೆಪಿಯ ಜನವಿರೋಧಿ ನೀತಿಯಿಂದ ರಾಜ್ಯ ಹಿಂಸಾಚಾರದತ್ತ ಮುಖ ಮಾಡುವಂತಾಗಿದೆ ಎಂದಿದ್ದಾರೆ.

ಗಲಭೆಕೋರರಿಗೆ ಶಾಕ್‌!
ಪ್ರತಿಭಟನಾಕಾರರ ಮೇಲೆ ಪೊಲೀಸರು ಕೈಗೊಂಡ ಕ್ರಮಗಳ ಕುರಿತು ಶನಿವಾರ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪ್ರತಿಕ್ರಿಯಿಸಿದ್ದು, “ನಾವು ಕೈಗೊಂಡ ಕ್ರಮಗಳಿಂದಾಗಿ ಪ್ರತಿಯೊಬ್ಬ ಪ್ರತಿಭಟನಕಾರನೂ ಶಾಕ್‌ಗೆ ಒಳಗಾಗಿದ್ದು, ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ’ ಎಂದಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಸಿಎಂ ಯೋಗಿ ಕಾರ್ಯಾಲಯ, “ಪ್ರತಿ ಗಲಭೆಕೋರನಿಗೂ ಆಘಾತವಾಗಿದೆ. ಸರಕಾರದ ಕಠಿನ ಕ್ರಮ ನೋಡಿ ಎಲ್ಲರೂ ಗಪ್‌ಚುಪ್‌ ಆಗಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರೇ ಅದರ ನಷ್ಟ ಭರಿಸಬೇಕು ಎಂದು ಆದೇಶಿಸಲಾಗಿದೆ. ಹಿಂಸೆಯಲ್ಲಿ ತೊಡಗುವ ಪ್ರತಿಯೊಬ್ಬ ಪ್ರತಿಭಟನಕಾರನೂ ಈಗ ಕಣ್ಣೀರು ಹಾಕುತ್ತಿದ್ದಾನೆ. ಏಕೆಂದರೆ, ಉತ್ತರ ಪ್ರದೇಶದಲ್ಲಿ ಇರುವುದು ಯೋಗಿ ಸರಕಾರ’ ಎಂದು ಬರೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next