ಚಿತ್ತಾಪುರ: ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಶೇ.100ರಷ್ಟು
ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಾಮಾಣಿಕವಾಗಿ ಈಡೇರಿಸಿದ್ದಾರೆ ಎಂದು ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್ ಪಾಟೀಲ ಹೇಳಿದರು.
ತಾಲೂಕಿನ ಕರದಳ್ಳಿಯಲ್ಲಿ ಟಿಎಸ್ಪಿ ಯೋಜನೆಯಡಿ 2017-18ನೇ ಸಾಲಿನ 12 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ
ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ತಾಲೂಕಿನಲ್ಲಿ ಪ್ರಿಯಾಂಕ ಖರ್ಗೆ ಚಿತ್ತಾಪುರ ತಾಲೂಕಿಗೆ 2 ಸಾವಿರ ಕೋಟಿಗೂ ಹೆಚ್ಚು ಹಣ ತಂದು ಅಭಿವೃದ್ಧಿ ಪಡಿಸುತ್ತಿರುವ ರಾಜ್ಯದ ಏಕೈಕ ಸಚಿವರು ಎಂದು ಹೆಸರುವಾಸಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಕಾರ್ಯಗತ ಮಾಡಬೇಕು ಎಂದು ತಿಳಿದು ಬೆಂಗಳೂರಿನ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ತಾಲೂಕಿನಲ್ಲಿರುವ ಪ್ರತಿಯೊಂದು ಸಮಸ್ಯೆಗಳು ಕೂಡಲೇ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿ ಅಭಿವೃದ್ಧಿಗೆ ಮುಂದಾಗಿದ್ದಾರೆ. ಆದ್ದರಿಂದ ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳೇ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ರಸ್ತೆಯನ್ನು ಗುಣಮಟ್ಟದಿಂದ ನಿರ್ಮಿಸಬೇಕು. ಅಂದಾಜು ಪಟ್ಟಿಯಂತೆ ಕೆಲಸ ಮಾಡಬೇಕು. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕಾಮಗಾರಿ ಕುರಿತು ಗಮನ ಹರಿಸಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ನಾಗಯ್ಯ ಗುತ್ತೇದಾರ ಪೂಜೆ ಸಲ್ಲಿಸಿದರು. ಜಿಪಂ ಸದಸ್ಯ ಶಿವರುದ್ರ ಭೀಣಿ, ಗ್ರಾಪಂ ಸದಸ್ಯರಾದ ಸುರೇಶ ಗುತ್ತೇದಾರ, ಗ್ಯಾನಪ್ಪ, ಜೆಇ ಪ್ರಭುಲಿಂಗ, ಮುಖಂಡರಾದ ಕಾಶಣ್ಣ ಗುತ್ತೇದಾರ, ನಾಗಮೂರ್ತಿ ಗುತ್ತೇದಾರ, ಸಿದ್ದಣ್ಣ, ಬೀರಪ್ಪ ಪೂಜಾರಿ, ಕೋರಿಸಿದ್ಧೇಶ್ವರ ಹಣಿಕೇರಾ, ಸೈದಣ್ಣ ಗುತ್ತೇದಾರ, ದುರ್ಗಪ್ಪ ತೇಲಗರ, ಗೌಸಮಿಯ್ನಾ, ಅಶೋಕ ಗುತ್ತೇದಾರ, ಯಲ್ಲಾಲಿಂಗ ಪೂಜಾರಿ ಇದ್ದರು