ಕಲಬುರಗಿ: ಉಮೇಶ್ ಜಾಧವ ಕಲಬುರಗಿ ಸಂಸದರಲ್ಲ ಅವರೇನಿದ್ದರೂ ಚಿಂಚೋಳಿ ಎಂಪಿ. ನಮ್ಮ ಪಕ್ಷವನ್ನು ಹಾಗೂ ನಾಯಕರನ್ನು ಟೀಕಿಸುವಾಗ ಮಾತ್ರ ಅವರು ಬಾಯಿ ತೆಗೆಯುತ್ತಾರೆ. ಆದರೆ ಅಭಿವೃದ್ದಿ ವಿಚಾರ ಬಂದಾಗ ಮೌನವಾಗಿರುತ್ತಾರೆ. ಹಾಗಾಗಿ ಕಲಬುರಗಿ ಹಾಗೂ ಗುರುಮಿಟ್ಕಲ್ ಅಭಿವೃದ್ದಿಗೆ ಅವರ ಕೊಡುಗೆ ಶೂನ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುಮಿಠಕಲ್ ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಭೀಕರ ಬರಗಾಲ ಎದುರಿಸುತ್ತಿದೆ. 40 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ. 18171 ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಅನುದಾನ ಬಿಡುಗಡೆ ಮಾಡಲಿಲ್ಲ.
ಬಿಜೆಪಿಯವರು ಈ ಹಿಂದೆ ನೀಡಿದ ಭರವಸೆಯಂತೆ ಕೋಲಿ ಹಾಗೂ ಕಬ್ಬಲಿಗ ಸಮಾಜವನ್ನು ಎಸ್ ಟಿ ಸೇರಿಸಬೇಕಾಗಿತ್ತು ಆದರೆ ಸಂಸದ ಈ ವಿಚಾರದಲ್ಲಿ ಯಾವ ಪ್ರಯತ್ನ ಮಾಡಲಿಲ್ಲ. ಇದು ಈ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಅರ್ಧಪಾಲು ರಾಜ್ ಸರ್ಕಾರದ್ದೂ ಇದೆ. ಆದರೆ, ಕೇಂದ್ರ ಸರ್ಕಾರ ಇವುಗಳನ್ನು ತನ್ನದೇ ಗ್ಯಾರಂಟಿ ಎಂದು ಬಿಂಬಿಸುತ್ತಿದೆ ಎಂದರು.
ಖರ್ಗೆ ಅವರ ಕರ್ಮಭೂಮಿಯಾದ ಗುರುಮಠಕಲ್ ಕ್ಷೇತ್ರದ ಜನರು ಈ ಸಲ ರಾಧಾಕೃಷ್ಣ ಅವರಿಗೆ ಗೆಲ್ಲಿಸಬೇಕು. ಯಾಕೆಂದರೆ ಈ ಭಾಗ ಕಳೆದ ಐದು ವರ್ಷದಿಂದ ಅಭಿವೃದ್ದಿಯಿಂದ ವಂಚಿತವಾಗಿದೆ. ಅಭಿವೃದ್ದಿ ಹಾಗೂ ಯುವಕರ ಭವಿಷ್ಯದ ಹಿತದೃಷ್ಠಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.