Advertisement
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರಿ ನೌಕರರು ಪಡೆಯಲು ಮಹಿಳೆಯರು ಮಂಚ ಏರಬೇಕು ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದರು. ಇಡೀ ರಾಜ್ಯದಲ್ಲಿ ಇಂದು ಹೆಣ್ಮಕ್ಕಳು ಸರಕಾರಿ ಅಥವಾ ಬೇರೆ ಕೆಲಸಕ್ಕೆ ಹೋಗಬೇಕೆಂದಿದ್ದರೆ ಅವರ ಬಗ್ಗೆ ಜನ ಏನು ಮಾತನಾಡಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಇಡೀ ಹೆಣ್ಣುಕುಲಕ್ಕೇ ಕಳಂಕ ಹಚ್ಚುವ ಕೆಲಸವನ್ನು ಪ್ರಿಯಾಂಕ್ ಖರ್ಗೆ ಮಾಡಿದ್ದಾರೆ ಎಂದು ಆಪಾದಿಸಿದರು.
Related Articles
Advertisement
ಮಂಚದ ವಿಚಾರ ಪ್ರಸ್ತಾಪಿಸಿದ ಅವರು, ನಿಮ್ಮ ರಾಷ್ಟ್ರೀಯ ನಾಯಕ ವೇಣುಗೋಪಾಲ್ ಅವರ ಮೇಲೆ ಎಷ್ಟು ಕೇಸುಗಳಿವೆ ಅದರದು? ಇದಕ್ಕೆ ನಿಮ್ಮ ಉತ್ತರವೇನು? ಇಲ್ಲೂ ಕೂಡ ಕಾಂಗ್ರೆಸ್ ಕಚೇರಿಗೆ ಅವರು ಬಂದಾಗ ಅವರಿಂದ ದೂರ ಇರಿ ಎಂಬ ಮಾತುಗಳನ್ನಾಡಿದ್ದು ನಾವೆಲ್ಲರೂ ಕೇಳಿಲ್ಲವೇ? ಅಷ್ಟೇ ಯಾಕೆ ಮಾನ್ಯ ಮೇಟಿಯವರ ಕಥೆ ಏನಾಯಿತು? ಇದಕ್ಕೆಲ್ಲ ಪ್ರಿಯಾಂಕ್ ಖರ್ಗೆ ಅವರ ಬಳಿ ಉತ್ತರವಿದೆಯೇ ಎಂದು ವ್ಯಂಗ್ಯವಾಡಿದರು.
ಕೇವಲ ನಿಮ್ಮ ಮಾತಿನ ಚಟಕ್ಕೆ ಬಿಜೆಪಿ ಸರಕಾರವನ್ನು ನೀವು ಮೂದಲಿಸುವುದು ಸರಿಯೇ? ಎಂದ ಅವರು, ಜನರು ನೀವು ಆಡಳಿತ ಮಾಡುವ ಸಂದರ್ಭದಲ್ಲಿ ನಿಮಗೆ ಆಡಿದ ಮಾತುಗಳನ್ನು ತಿರುಚಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಪ್ರಾರಂಭಿಸಿದ್ದೀರಿ. ಪ್ರಬುದ್ಧತೆ ಇದ್ದರೆ ಪ್ರಿಯಾಂಕ್ ಖರ್ಗೆ ಇಂಥ ಮಾತುಗಳನ್ನು ಆಡುತ್ತಿರಲಿಲ್ಲ. ನೀವು ಪ್ರಬುದ್ಧತೆ ಇಲ್ಲದ ವ್ಯಕ್ತಿ. ಇನ್ನೂ ಅನುಭವ ಆಗಬೇಕಿದೆ. ನೀವು ರಾಜಕಾರಣಕ್ಕೆ ಹೊಸಬರು. ಆಗಲೇ ಹಿರಿಯ ರಾಜಕಾರಣಿಗಳಂತೆ ಮಾತನಾಡಿ ಸಿಕ್ಕಿಹಾಕಿಕೊಳ್ಳುತ್ತಿದ್ದೀರಿ ಎಂದು ಟೀಕಿಸಿದರು.
ಬಾಯಿ ಮುಚ್ಚಿಕೊಂಡು ಹಿರಿಯರನ್ನು ಅನುಸರಿಸಿ ಎಂದ ಅವರು, ರಾಷ್ಟ್ರೀಯ ನಾಯಕರಾದ ನಿಮ್ಮ ತಂದೆಯಿಂದ ಇದೇ ಕಲಿತಿದ್ದೀರಾ? ಆ ಗೌರವಾನ್ವಿತ ಕುಟುಂಬಕ್ಕೂ ನೀವು ಕಳಂಕ ಆಗಿ ಬಿಟ್ಟಿರಲ್ಲವೇ? ಎಂದು ಕೇಳಿದರು. ನಿಮ್ಮ ತಪ್ಪುಗಳೆಲ್ಲವೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಸೇರುತ್ತದೆ ಎಂದರಲ್ಲದೆ, ಪ್ರಿಯಾಂಕ್ ಖರ್ಗೆಯವರು ದೇಶ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಮುಂದಿನ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಇಂದಿನಿಂದ ಪ್ರಧಾನಿ ನರೇಂದ್ರ ಅವರ ಕರೆಯನ್ವಯ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮಾಚರಣೆ ನಡೆದಿದೆ. ಇಂಥ ಸಂಭ್ರಮದ ಸಂದರ್ಭದಲ್ಲಿ ನಿಮ್ಮ ಕೆಟ್ಟ ಪದಗಳ ಬಳಕೆ ಎಷ್ಟು ಸರಿ? ಹೊಲಸು ಕಾಲಿಗೂ ಮುಟ್ಟಬಾರದೆಂದು ನಾವೆಲ್ಲ ಪಾದರಕ್ಷೆ ಧರಿಸುತ್ತೇವೆ. ಆದರೆ, ನೀವು ಕಾಲಿಗೆ ಮಾತ್ರವಲ್ಲ, ನಾಲಿಗೆಗೂ ಹೊಲಸನ್ನು ಹಚ್ಚಿಕೊಂಡು ಬಿಟ್ಟಿದ್ದೀರಲ್ಲ ಎಂದು ಕಿಡಿಕಾರಿದರು. ಮಾಜಿ ಸಚಿವರಾಗಿ ನಿಮ್ಮ ಯೋಗ್ಯತೆಗೆ ಸರಿಯಾದ ಮಾತುಗಳೇ ಇವು? ಎಂದು ಆಕ್ಷೇಪಿಸಿದರು.
ಪ್ರಿಯಾಂಕ್ ಖರ್ಗೆಯವರು ತಕ್ಷಣ ರಾಜ್ಯದ ಜನರ ಕ್ಷಮೆಯನ್ನು ಯಾಚಿಸಬೇಕು ಎಂದು ಆಗ್ರಹಿಸಿದರು. ಅವರು ಇನ್ನೂ ತಮ್ಮ ಹೇಳಿಕೆಯೇ ಸರಿ ಎಂದು ಟಿ.ವಿ. ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ಇದು ಉದ್ಧಟತನ ಎಂದು ಟೀಕಿಸಿದರು.
ಇದನ್ನೂ ಓದಿ: ಅಂಗಾಂಗ ದಾನ: ಸಿಎಂ ಬೊಮ್ಮಾಯಿ ಸಹಿತ ಸಚಿವರ ನೋಂದಣಿ
ಕಾಂಗ್ರೆಸ್ ಪಕ್ಷದವರು ನಿನ್ನೆ- ಮೊನ್ನೆಯಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಬಿಜೆಪಿ ಬಾವುಟವನ್ನು ಎಲ್ಲೂ ಪ್ರದರ್ಶಿಸಿಲ್ಲ. ನಾವು ಮನೆಮನೆಗೆ ರಾಷ್ಟ್ರಧ್ವಜವನ್ನು ಕೊಟ್ಟಿದ್ದೇವೆ. ಜನರು ಪಾದಯಾತ್ರೆ ಮೂಲಕ ಅದನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‍ನವರು ಪೈಪೋಟಿಗೆ ಬಿದ್ದಹಾಗೆ 4 ರಾಷ್ಟ್ರಧ್ವಜ ಇದ್ದರೆ, ಇನ್ನೆಲ್ಲ ಕೂಡ ಕಾಂಗ್ರೆಸ್ ಧ್ವಜದೊಂದಿಗೆ ಕಾಂಗ್ರೆಸ್ ಪ್ರಚಾರಸಭೆ ಮಾಡಿದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಹುಶಃ ಸಿದ್ದರಾಮಯ್ಯರವರ ವಿರುದ್ಧ ಪೈಪೋಟಿಗೆ ಇಳಿದಂತೆ ಕಾಣುತ್ತಿದೆ. ಅವರು ದಾವಣಗೆರೆಯಲ್ಲಿ ಸಮಾರಂಭ ಮಾಡಿದ್ದರೋ ಅದಕ್ಕೆ ಉತ್ತರವೆಂಬಂತೆ ಕಾಂಗ್ರೆಸ್ ಉತ್ಸವ ಮಾಡುತ್ತಿದ್ದಾರೆ. ಇದು ದೇಶದ ಉತ್ಸವವಲ್ಲ. ಕಾಂಗ್ರೆಸ್‍ನ ನಿಜ ಬಣ್ಣವನ್ನು ಆಗಾಗ ಅವರೇ ತೆರೆದು ಇಡುತ್ತಿದ್ದಾರೆ. ಇದು ನಿಜವಾಗಿ ದೇಶದ ಹಬ್ಬ ಎಂಬುದನ್ನು ಅರಿತು ವರ್ತಿಸಲಿ ಎಂದು ಆಗ್ರಹಿಸಿದರು.
ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಕುರಿತು ಕೆಟ್ಟದಾಗಿ ಮಾತನಾಡುವ ಕೆಟ್ಟಚಾಳಿ ಕಾಂಗ್ರೆಸ್ಸಿಗರದು. ಕೆಟ್ಟ ಚಾಳಿ ಬಿಟ್ಟು ನಿಜ ದಾರಿಯಲ್ಲಿ ಬರಬೇಕು. ದೇಶದ ಜನರನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.