ಬೆಂಗಳೂರು: ಬಡ್ತಿ ಮೀಸಲಾತಿ ಪ್ರಕರಣ ಮೈತ್ರಿ ಸರ್ಕಾರಕ್ಕೆ ಕಂಟಕವಾಗಿ ಎರಡೂ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಒಂದು ಹಂತದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಬೆದರಿಕೆ ಹಾಕಿ ಕಾಯ್ದೆ ಅನುಷ್ಠಾನಕ್ಕೆ ಒತ್ತಡ ಹೇರಿದ್ದರು.
2016ರ ಫೆ.9ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಿಂದ ರಾಜ್ಯದಲ್ಲಿ ಎಸ್ಸಿ,ಎಸ್ಟಿ ನೌಕರರು ಹಿಂಬಡ್ತಿ ಪಡೆಯುವಂತಾಗಿತ್ತು. ಅದನ್ನು ತಪ್ಪಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಆ ಸಮಯದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ರಾಜ್ಯದಲ್ಲಿ ಎಸ್ಸಿ,ಎಸ್ಟಿ ನೌಕರರ ಸಾಮಾಜಿಕ, ಆರ್ಥಿಕ ಹಾಗೂ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಯ ಬಗ್ಗೆ ಅಧ್ಯಯನ ನಡೆಸಿ ವರದಿ ಪಡೆಯಿತು.
ವರದಿ ಆಧರಿಸಿ ಹಿಂಬಡ್ತಿ ಹೊಂದಿದ್ದ ಎಸ್ಸಿ,ಎಸ್ಟಿ ನೌಕರರ ಹಿತ ಕಾಯಲು ಸುಗ್ರೀವಾಜ್ಞೆ ಹೊರಡಿಸಿತು. ಆದರೆ, ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳಿಸಿ, ಈ ಬಗ್ಗೆ ಸದನದಲ್ಲಿ ಚರ್ಚಿಸಿ, ಕಾಯ್ದೆ ರೂಪಿಸುವಂತೆ ಸಲಹೆ ನೀಡಿದ್ದರು. ಅವರ ಸಲಹೆ ಮೇರೆಗೆ ಮೀಸಲಾತಿ ಆಧಾರದಲ್ಲಿ ಹಿಂಬಡ್ತಿ ಪಡೆದ ಎಸ್ಸಿ,ಎಸ್ಟಿ ನೌಕರರ ಹಿತ ಕಾಯಲು ತತ್ಸಮಾನ ಹುದ್ದೆ ನೀಡುವ ಕಾಯ್ದೆ-2017ನ್ನು ಜಾರಿಗೆ ತರಲಾಯಿತು. ಈ ಕಾಯ್ದೆಗೆ ರಾಜ್ಯಪಾಲರು ಒಪ್ಪಿಗೆ ನೀಡದೆ ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿದ್ದರು. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಈ ಕಾಯ್ದೆಗೆ ಅಂಕಿತ ಹಾಕದೆ ಹಾಗೇ ಉಳಿಸಿಕೊಂಡಿದ್ದರು.
ನಂತರ, ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ರಾಷ್ಟ್ರಪತಿಯನ್ನು ಭೇಟಿ ಮಾಡಿ, ಕಾಯ್ದೆಗೆ ಅಂಕಿತ ಹಾಕುವಂತೆ ಮನವಿ ಮಾಡಿದ್ದರು. ರಾಜ್ಯ ಸರ್ಕಾರದ ಕಾಯ್ದೆಗೆ ರಾಷ್ಟ್ರಪತಿಯವರು 2018ರ ಜೂನ್ 14ರಂದು ಅಂಕಿತ ಹಾಕಿದರು. ಜೂನ್ 23ರಂದು ರಾಜ್ಯ ಸರ್ಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿತು.
ಮೈತ್ರಿಯಲ್ಲಿ ಗೊಂದಲ: ಕೋವಿಂದ್ ಅಂಕಿತ ಹಾಕಿದ ಸಂದರ್ಭದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್‌ನ ಸಚಿವರು ವಿಶೇಷವಾಗಿ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಈ ಕಾಯ್ದೆಯನ್ನು ಜಾರಿಗೆ ತರುವಂತೆ ಸಂಪುಟ ಸಭೆಯಲ್ಲಿ ನಿರಂತರ ಒತ್ತಡ ಹೇರುವ ಪ್ರಯತ್ನ ನಡೆಸಿದರು. ಆದರೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಾತ್ರ ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ಜಾರಿಗೊಳಿಸದಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಹೇಳಲಾಗುತ್ತಿತ್ತು.
ಈ ನಡುವೆ, ಈ ಕಾಯ್ದೆ ಮೂಲ ದಾವೆಗೆ ವಿರುದ್ಧವಾಗಿದೆ ಎಂದು ಅಹಿಂಸಾ ಸಂಘಟನೆಯವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಹೀಗಾಗಿ, ಕಾಯ್ದೆಯ ಅನುಷ್ಠಾನವನ್ನು ಮುಂದೂಡಬೇಕಾಯಿತು. ಆದರೆ, ಪ್ರಿಯಾಂಕ್ ಖರ್ಗೆ, ಸುಪ್ರೀಂಕೋರ್ಟ್‌ನಲ್ಲಿನ ವಿಚಾರಣೆಗೂ, ಕಾಯ್ದೆ ಅನುಷ್ಠಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಾದ ಮಂಡಿಸಿ, ಕಾಯ್ದೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು.
2019ರ ಜನವರಿಯಲ್ಲಿ ನಡೆದ ಅಧಿವೇಶನದಲ್ಲಿಯೂ ಈ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಜನವರಿ ತಿಂಗಳ ಕೊನೆ ವಾರದಲ್ಲಿ ಸುಪ್ರೀಂಕೋರ್ಟ್ ಮುಂದೆ ಪ್ರಕರಣ ವಿಚಾರಣೆಗೆ ಬರುತ್ತಿದ್ದು, ಸುಪ್ರೀಂಕೋರ್ಟ್ ತೀರ್ಪು ನೀಡದಿದ್ದರೂ ರಾಜ್ಯ ಸರ್ಕಾರದ ಕಾಯ್ದೆ ಜಾರಿಗೆ ಬದ್ಧವಾಗಿರಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ಇದರ ನಡುವೆಯೇ ಕಾಯ್ದೆ ಜಾರಿ ಸಂಬಂಧ ಪಟ್ಟಿ ಸಿದ್ಧಪಡಿಸಿ ಕೆಲವು ಇಲಾಖೆಗಳಲ್ಲಿ ಮೀಸಲಾತಿಯನ್ನು ಅನುಷ್ಟಾನಗೊಳಿಸಲಾಗಿತ್ತು. ಇದರ ನಡುವೆ ಸುಪ್ರೀಂಕೋರ್ಟ್‌ನಲ್ಲಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರಿಂದ ಮತ್ತೆ ಅದಕ್ಕೆ ತಡೆಬಿದ್ದಂತಾಗಿತ್ತು.