Advertisement
ಸರ್ಕಾರ ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ. ನೀವು ಈ ಪ್ರಣಾಳಿಕೆ ಮೂಲಕ ಜನರಿಂದ ಮತ ಹಾಕಿಸಿಕೊಂಡಿದ್ದೀರಿ. ಹೀಗಾಗಿ ನೀವು ಜನರಿಗೆ ಉತ್ತರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಇದನ್ನೂ ಓದಿ : ಸಂಸ್ಥೆಗಳಿಗೆ ಪಾವತಿಸಬೇಕಾದ ಬಾಕಿ ಮೊತ್ತ ನಾಗರಿಕರು ಕೂಡಲೇ ಪಾವತಿಸಿ: ಮೌವಿನ್ ಗೊಡಿನ್ಹೋ
ಸಿಬಿಐ ತನ್ನ ವರದಿ ಸಲ್ಲಿಸಿ ಪರೇಶ್ ಮೇಸ್ತಾ ಪ್ರಕರಣವನ್ನು ಮುಕ್ತಾಯ ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಈ ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಆಕಸ್ಮಿಕ. ಯಾವುದೇ ಕೋಮುಗಲಭೆಯಲ್ಲಿ ಆಗಿರುವ ಸಾವು ಅಲ್ಲ. ಡಿ.6, 2017ರಂದು ಹೊನ್ನಾವರದ ಗುಡ್ ಲಕ್ ಹೊಟೇಲ್ ಬಳಿ ಕೋಮು ಗಲಭೆ ಆರಂಭವಾಗುತ್ತದೆ. ನಂತರ ಪರೇಶ್ ಮೇಸ್ತಾ ಕಾಣೆಯಾಗಿ ಡಿ.8ರಂದು ಶೆಟ್ಟಿಕೆರೆ ಬಳಿ ಮೃತದೇಹ ಸಿಗುತ್ತದೆ.
ತನಿಖಾ ವರದಿಯಲ್ಲಿ ತಿಳಿಸಿರುವಂತೆ ಡಿ.6, 2017ರಂದು ಹಿಂದೂ ಸಂಘಟನೆ ಮುಖಂಡರು ಮತಾಂತರ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿದ್ದಾಗ ಅಪಘಾತದ ಬಗ್ಗೆ ಸುದ್ದಿ ಬರುತ್ತದೆ. ಅಪಘಾತಕ್ಕೆ ಒಳಗಾದ ಆಟೋ ಚಾಲಕ ಹಿಂದೂವಾಗಿದ್ದು, ಬೈಕ್ ಚಾಲಕ ಮುಸಲ್ಮಾನನಾಗಿದ್ದ. ಆಗ ಹಿಂದೂ ಸಂಘಟನೆ ಸದಸ್ಯರು ಅಪಘಾತ ಸ್ಥಳವಾದ ಶರಾವತಿ ವೃತ್ತದ ಬಳಿ ಹೋಗುತ್ತಾರೆ. ಅಲ್ಲಿ ಯಾರೂ ಇರದ ಕಾರಣ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಾರೆ. ಅಪಘಾತಕ್ಕೆ ಒಳಗಾದವರು ಸ್ಥಳೀಯರಲ್ಲದ ಕಾರಣ ರಾಜಿ ಮಾಡಿಕೊಂಡು ಆಸ್ಪತ್ರೆಯಿಂದಲೂ ತೆರಳಿದ್ದರು ಎಂದು ತಿಳಿಯುತ್ತದೆ. ಆದರೂ ಸಂಘಟನೆಯವರು ಗುಡ್ ಲಕ್ ಹೊಟೇಲ್ ಬಳಿ ಹೋಗಿ ಮುಸಲ್ಮಾನ ಯುವಕರೊಂದಿಗೆ ವಾಗ್ವಾದ ನಡೆಸಿದಾಗ ರಾತ್ರಿ 8.15ರ ಸುಮಾರಿಗೆ ಕೋಮುಗಲಭೆಯ ಕಿಚ್ಚು ಹೊತ್ತಿಕೊಳ್ಳುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದರು.
ಈ ವರದಿಯಲ್ಲಿ ಮುಂದುವರಿದು, ಪರೇಶ್ ಮೇಸ್ತಾ ಡಿ.6ರಂದು ಸಂಜೆ 6.54ರ ಸುಮಾರಿಗೆ ಕುಮಟಾಯಿಂದ ಹಿಂದಿರುಗುತ್ತಾರೆ. ನಂತರ ಮನೆಯವರಿಗೆ ತಾನು ಶನೇಶ್ವರ ದೇವಾಲಯಕ್ಕೆ ಹೋಗುವುದಾಗಿ ಹೊರಗೆ ಹೋಗುತ್ತಾರೆ. ನಂತರ ಮಾಲೆ ಹಾಕುವ ವಿಚಾರವಾಗಿ ಪರೇಶ್ ತನ್ನ ಸ್ನೇಹಿತ ಅತುಲ್ ಮೇಸ್ತಾ ಜತೆ ತುಳಸಿ ನಗರದ ಅಯ್ಯಪ್ಪ ದೇವಾಲಯಕ್ಕೆ ಹೋಗುತ್ತಾರೆ. ನಂತರ ಮತ್ತೊಬ್ಬ ಸ್ನೇಹಿತ ದೀಪಕ್ ಮೇಸ್ತಾ ಮನೆಗೆ ಹೋಗಿ ಆತನ ಸ್ಕೂಟರೆ ತೆಗೆದುಕೊಂಡು 8.15ರ ಸುಮಾರಿಗೆ ವೈನ್ ಶಾಪ್ ಗೆ ಹೋಗಿ ಅಲ್ಲಿ ಬಿಯರ್ ಖರೀದಿ ಮಾಡುತ್ತಾನೆ. ಕೆಲ ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಕಾಲು ಪೆಟ್ಟಾಗಿರುವ ಕಾರಣ ಅದೇ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಶರತ್ ಮೇಸ್ತಾ ಮೂಲಕ ಬೈಕ್ ಕಿಕ್ ಮಾಡಿಸಿಕೊಂಡು ಹೋಗಲು ಮುಂದಾಗುತ್ತಾನೆ. ಆಗ ಗುಡ್ ವಿಲ್ ಹೋಟೇಲ್ ಬಳಿ ಗಲಾಟೆ ವಿಚಾರ ತಿಳಿದ ನಂತರ ಅಲ್ಲಿಗೆ ಹೋಗಿ, ನಂತರ ಸೆಂಟ್ ಥಾಮಸ್ ಶಾಲಾ ಮೈದಾನದಲ್ಲಿ ತನ್ನ ಸ್ನೇಹಿತ ಅಶೋಕ್ ಮೇಸ್ತಾನನ್ನು ಭೇಟಿಯಾಗಿ ದೀಪಕ್ ಮೇಸ್ತಾನ ಸ್ಕೂಟರ್ ಕೀ ಕೊಟ್ಟು ಕೋಮು ಗಲಭೆ ಆರಂಭದ ವಿಚಾರ ತಿಳಿಸುತ್ತಾನೆ. ನಂತರ ರಾತ್ರಿ 10 ರಿಂದ 10.30 ಸುಮಾರಿಗೆ ಪರೇಶ್ ನನ್ನು ಅವರ ಸ್ನೇಹಿತರಾದ ಗಜಾನನ ಮೇಸ್ತಾ, ವಿನಾಯಕ್ ಗಣೇಶ್ ಮೇಸ್ತಾ, ಆಕಾಶ್ ಬಾಲಕೃಷ್ಣ ಮೇಸ್ತಾ ಅವರು ಕಡೇಯ ಬಾರಿಗೆ ಶಾಲಾ ಮೈದಾನದ ಬಳಿ ನೋಡಿರುತ್ತಾರೆ. ಡಿ.6ರ ರಾತ್ರಿ ಪರೇಶ್ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಡಿ.7ರಂದು ಪರೇಶ್ ಮೇಸ್ತಾ ಅವರ ತಂದೆ ಕಮಲಾಕರ ಮೇಸ್ತಾ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ದೂರು ನೀಡುತ್ತಾರೆ.
ನಂತರ ಡಿ.8ರಂದು ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಅವರ ಶವ ಸಿಗುತ್ತದೆ. ನಂತರ ಪರೇಶ್ ತಂದೆ ಐದು ಜನ ಅಲ್ಪಸಂಖ್ಯಾತ ಸಮುದಾಯದವರ ವಿರುದ್ಧ ದೂರು ನೀಡುತ್ತಾರೆ. ಮೃತ ದೇಹವನ್ನು ಪರೀಕ್ಷೆಗೆ ನಡೆಸಲು ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಮಣಿಪಾಲ ವಿವಿಯ ಕಸ್ತೂರಿ ಬಾ ಕಾಲೇಜಿನ ಪ್ರಾದ್ಯಾಪಕರಾದ ಡಾ.ಬಕ್ಕನವರ್ ಎಂಬುವವರು ಮರಣೋತ್ತರ ಪರೀಕ್ಷೆ ನಡೆಸಿದರು. ಅವರ ವರದಿಯಲ್ಲಿ ಪರೇಶ್ ಮೇಸ್ತಾ ಅವರ ದೇಹದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಯಾವುದೇ ಗುರುತುಗಳಿಲ್ಲ. ಮದ್ಯ ಸೇವನೆ, ವಿಷ ಹಾಗೂ ಡ್ರಗ್ಸ್ ಸೇವನೆಯ ಯಾವುದೇ ಅಂಶಗಳು ಮೃತದೇಹದಲ್ಲಿ ಕಂಡುಬಂದಿಲ್ಲ. ಮೃತನ ದೇಹದಲ್ಲಿ ಆ ಕೆರೆಯ ನೀರು ಸೇವನೆಯಾಗಿರುವ ಅಂಶ ಖಚಿತವಾಗಿದ್ದು, ಮೃತನನ್ನು ಹತ್ಯೆ ಮಾಡಿ ನಂತರ ಕೆರೆಗೆ ಎಸೆದಿರುವ ಸಾಧ್ಯತೆ ಇಲ್ಲವಾಗಿದೆ ಎಂದು ತಿಳಿಸಲಾಗಿದೆ. ಇನ್ನು ಶ್ವಾಸಕೋಶದ ಪರೀಕ್ಷೆ ಮಾಡಿದಾಗ ಈ ಸಾವು ಕೆರೆಯಲ್ಲಿ ಮುಳುಗಿ ಆಗಿರುವ ಸಾವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಈ ವರದಿಯಲ್ಲಿ ಮೃತನ ಕುತ್ತಿಗೆ ಭಾಗ ಹಾಗೂ ಮೂಳೆಗೆ ಯಾವುದೇ ಹಾನಿಯಾಗಿರುವ ಲಕ್ಷಣಗಳು ಇಲ್ಲವಾಗಿದ್ದು ಬೇರೆಯವರು ಬಲವಂತವಾಗಿ ಮುಳುಗಿಸಿ, ಅಥವಾ ಉರುಳು ಹಾಕಿರುವ ಸಾಧ್ಯತೆ ಇಲ್ಲವಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈ ಸಾವು ಆಕಸ್ಮಿಕವೇ ಹೊರತು ಹತ್ಯೆಯಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗುತ್ತದೆ. ಇನ್ನು ಸಿಬಿಐ ತನಿಖಾಧಿಕಾರಿಗಳು ಎರಡನೇ ಅಭಿಪ್ರಾಯ ಪಡೆಯಲು ಪಾಂಡಿಚೆರಿಗೆ ಪರೀಕ್ಷೆಗೆ ಕಳುಹಿಸುತ್ತಾರೆ. ನಂತರ ಅವರೂ ಕೂಡ ಇದು ನೀರಿನಲ್ಲಿ ಮುಳುಗಿರುವ ಆಕಸ್ಮಿಕ ಸಾವಾಗಿದೆ ಎಂದು ತಿಳಿಸಿದ್ದಾರೆ.