ಕಲಬುರಗಿ: ‘ನನ್ನನ್ನು ಹರಕೆಯ ಕುರಿ ಮಾಡಿ ಪಕ್ಷಾಂತರಕ್ಕೆ ಮುಂದಾಗಬೇಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅತೃಪ್ತ ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ್ ಅವರಲ್ಲಿ ಮನವಿ ಮಾಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಪಕ್ಷಾಂತರ ಮಾಡುವ ಕೆಲಸ ನಡೆದಿದೆ. ಈ ವಿಷಯದಲ್ಲಿ ನನ್ನನ್ನು ಹರಕೆ ಕುರಿ ಮಾಡಲಾಗುತ್ತಿದೆ ಎಂದರು. ತಾವು ಯಾವುದೇ ಶಾಸಕರ ಕ್ಷೇತ್ರಗಳ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿ ಡಾ| ಉಮೇಶ ಜಾಧವ್ ಮಾಡಿದ ಆರೋಪವನ್ನು ತಳ್ಳಿಹಾಕಿದ ಅವರು, ಏನೇ ಅಸಮಾಧಾನವಿದ್ದರೂ ಜಾಧವ್ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬಹುದು ಎಂದರು. ಡಾ| ಜಾಧವ್ ಅಷ್ಟೇ ಅಲ್ಲ, ಯಾರೇ ಪಕ್ಷ ಬಿಟ್ಟು ಹೋದರೂ ಪಕ್ಷಕ್ಕೆ ನಷ್ಟವಾಗಲಿದೆ. ಮಾಧ್ಯಮದ ಮೂಲಕ ಅವರನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ ಎಂದು ಹೇಳಿದರು.
ನೋಟಿಸ್ ಬಂದಿಲ್ಲ’
ಚಿಂಚೋಳಿ: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಗೆ ಅನಾರೋಗ್ಯದ ಹಿನ್ನೆಲೆಯಿಂದಾಗಿ ಗೈರಾಗಿದ್ದ ಕುರಿತು ನನಗೆ ಯಾವುದೇ ನೋಟಿಸ್ ಬಂದಿಲ್ಲ, ಹೀಗಾಗಿ ಉತ್ತರ ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಡಾ| ಉಮೇಶ ಜಾಧವ್ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಖೊದಂಪೂರ ಗ್ರಾಮದಲ್ಲಿ ಶನಿವಾರ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ‘ನೋಟಿಸ್ ಬಂದರೆ ಸಮಂಜಸ ಉತ್ತರ ಕೊಡುತ್ತೇನೆ. ಇದುವರೆಗೆ ಯಾವುದೇ ಪಕ್ಷ ಸೇರುವ ಕುರಿತು ನಿರ್ಧಾರ ಕೈಗೊಂಡಿಲ್ಲ. ಜನರ ನಿರ್ಧಾರವೇ ನನ್ನ ನಿರ್ಧಾರ’ ಎಂದರು. ‘ಕಲಬುರಗಿ ನಗರಕ್ಕೆ ಪ್ರಧಾನಿ ಮೋದಿ ಫೆ.10ರಂದು ಭೇಟಿ ನೀಡಲಿದ್ದಾರೆ. ಆದರೆ, ನನಗೆ ಪ್ರಧಾನಿ ಭೇಟಿ ಕುರಿತು ಇದುವರೆಗೂ ಯಾವುದೇ ಮಾಹಿತಿ ಇಲ್ಲ’ ಎಂದು ತಡವರಿಸುತ್ತ ಹೇಳಿ ಶಾಸಕ ಡಾ| ಉಮೇಶ ಜಾಧವ್ ಗಡಿಬಿಡಿಯಲ್ಲೇ ಕಾರಿನಲ್ಲಿ ಹೊರಟು ಹೋದರು.