ವಾಡಿ: ಓರ್ವ ಶಾಸಕನ ನೇತೃತ್ವದಲ್ಲಿ ನಡೆಯಬೇಕಾಗಿದ್ದ ವಿವಿಧ ಫಲಾನುಭವಿಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಬರುವ ಅಗತ್ಯವಿತ್ತಾ? ಟಾರ್ಗೇಟ್ ರಾಜಕಾರಣಕ್ಕಿಳಿದಿರುವ ಬಿಜೆಪಿಗರು, ಮುಂದಿನ ದಿನ ಹೊಲಗದ್ದೆಗಳ ಹಾಣಾದಿ ರಸ್ತೆಗಳ ಉದ್ಘಾಟನೆಗೂ ಪ್ರಧಾನಿಯನ್ನೇ ಕರೆಸಿದರೆ ಆಶ್ಚರ್ಯ ಪಡಬೇಕಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.
ಚಿತ್ತಾಪುರ ತಾಲೂಕಿನ ಬೊಮ್ಮನಳ್ಳಿ ಗ್ರಾಮಕ್ಕೆ ಮಂಜೂರಾದ 1.82 ಕೋಟಿ ರೂ. ಅನುದಾನದಡಿ ಸಿಸಿ ರಸ್ತೆಗಳ ಅಭಿವೃದ್ಧಿ, ಮನೆ ಮನೆಗೆ ನಳ ಸಂಪರ್ಕ ಹಾಗೂ ಕೈಗೆತ್ತಿಕೊಳ್ಳಲಾದ ಗ್ರಾಮದ ಶಿಥಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜೀರ್ಣೋದ್ಧಾರಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ನೆಟೆ ರೋಗದಿಂದ ತೊಂದರೆಗೆ ಸಿಲುಕಿರುವ ಜಿಲ್ಲೆಯ ರೈತರಿಗೆ ಪರಿಹಾರ ಘೋಷಿಸುವಂತೆ ಪ್ರಧಾನಿ ಬಳಿ ಮನವಿ ಮಾಡಿಕೊಳ್ಳುವ ದೈರ್ಯ ಜಿಲ್ಲೆಯ ಯಾವ ಬಿಜೆಪಿ ಶಾಸಕನಿಗೂ ಇಲ್ಲ. ತಂಡ ಕಟ್ಟಿಕೊಂಡು ಚಿತ್ತಾಪುರಕ್ಕೆ ಬಂದು ಪ್ರಿಯಾಂಕ್‌ನನ್ನು ಸೋಲಿಸುತ್ತೇವೆ ಎಂದು ಮೈಕ್ ಮುಂದೆ ಧಮ್ಮು ತೋರಿಸುತ್ತಾರೆ. ತೊಗರಿ ಕೈಕೊಟ್ಟ ಕಾರಣ ಈ ವರ್ಷ ಸಾಲದ ಸೂಲಕ್ಕೆ ಸಿಲುಕಿದ ಮೂರ್ನಾಲ್ಕು ಜನ ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬಿಜೆಪಿಯ ಡಬಲ್ ಎಂಜೀನ್ ಸರ್ಕಾರಕ್ಕೆ ಕಿಂಚಿತ್ತೂ ಕನಿಕರವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕ್ತೀವಿ ಎಂದು ನೀಡಿದ್ದ ಭರವಸೆಯನ್ನು ನಾವು ನಂಬಬೇಕಂತೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡ್ತೀವಿ ಎಂದು ಭರವಸೆ ಕೊಟ್ಟರೆ ನಂಬಿಕೆಗೆ ಅರ್ಹವಲ್ಲವಂತೆ. ಕೋಟಿ ಉದ್ಯೋಗ ಕೊಡಲಿಲ್ಲ. ಖಾತೆಗೆ ಹಣ ಬರಲಿಲ್ಲ. ಬದಲಿಗೆ ಅಡುಗೆ ಅನಿಲ, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್, ದಿನಸಿ ಬೆಲೆ ಏರಿಕೆ ಮಾಡಿ ಬಡವರ ಬದುಕಿನ ಮೇಲೆ ಬರೆ ಎಳೆದವರಿಗೆ ಈಗ ಹೊಟ್ಟೆಯುರಿ ಶುರುವಾಗಿದೆ. ಕಾಂಗ್ರೆಸ್ ನೀಡುತ್ತಿರುವ ಭರವಸೆಗಳು ನುಂಗಲಾರದ ತುತ್ತಾಗಿವೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಬಿಜೆಪಿ ನೀಡಿದ್ದ 600 ಭರವಸೆಗಳಲ್ಲಿ 60 ಕೂಡ ಈಡೇರಿಸಿಲ್ಲ. ಬಿಜೆಪಿಗರು ಯುವಕರಿಗೆ, ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಕಂಬಳೇಶ್ವರ ಮಠದ ಶ್ರೀಸೋಮಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೆಮೂದ್ ಸಾಹೇಬ, ಭೀಮಣ್ಣ ಸಾಲಿ, ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೊಳ, ಗ್ರಾಪಂ ಅಧ್ಯಕ್ಷೆ ಸರೋಜಿನಿ ಬಿ.ದೇಶಮುಖ, ಗ್ರಾಪಂ ಸದಸ್ಯರಾದ ಮಲ್ಲಮ್ಮ, ರಹೆಮಾನಸಾಬ ಬಾಂಬೆ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
“ಚಿತ್ತಾಪುರಕ್ಕೆ ಬಿಡುಗಡೆಯಾದ 270 ಕೋಟಿ ರೂ. ಅನುದಾನ ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ. ಅಭಿವೃದ್ಧಿ ವಿಷಯದಲ್ಲಿ ಜಿಲ್ಲೆಗೆ ಮಲತಾಯಿ ದೋರಣೆ ತೋರಿದೆ. ಬಿಜೆಪಿ ಮುಖಂಡರಿಗೆ ಬುದ್ದಿ ಭ್ರಮಣೆಯಾಗಿದೆ. ಪದೇಪದೆ ನನ್ನನ್ನು ಸೋಲಿಸುವ ಮಾತನಾಡುತ್ತಿದ್ದಾರೆ. ಚಿತ್ತಾಪುರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಂಡು ಹತಾಶರಾಗಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಶೇ.40 ಕಮಿಷನ್ ದಂಧೆಯಲ್ಲಿ ಮತ್ತು ಸರ್ಕಾರಿ ನೌಕರಿಗೆ ದರ ನಿಗದಿ ಪಡಿಸುವ ಮೂಲಕ ಬಿಜೆಪಿ ಸರ್ಕಾರ ಯುವಕರ ಭವಿಷ್ಯ ಮಾರಾಟಕ್ಕಿಟ್ಟಿದೆ. ನಾನು ಮತದಾರರಿಗೆ ಯಾವತ್ತು ಸುಳ್ಳು ಭರವಸೆ ನೀಡಿ ಕೀಳು ರಾಜಕಾರಣ ಮಾಡಿದವನಲ್ಲ. ಬಿಜೆಪಿ ನಾಯಕರಿಗೆ ಪ್ರಬುದ್ಧತೆಯ ಕೊರತೆ ಕಾಡುತ್ತಿದೆ.”
– ಪ್ರಿಯಾಂಕ್ ಖರ್ಗೆ. ಶಾಸಕ.
ಇದನ್ನೂ ಓದಿ: ಗುಂಪುಗಾರಿಕೆಗೆ ಬೇಸತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಪಂಜಾಬ್ ಮಾಜಿ ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್