ಕಲಬುರಗಿ: ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ‘ಸಂವಿಧಾನದ ಸಂವಾದ’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶೋಕಾಚರಣೆ ಮಧ್ಯೆ ಹಮ್ಮಿಕೊಂಡಿದ್ದನ್ನು ಖಂಡಿಸಿ ನಗರದಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯ ಆಗಿರುವುದರಿಂದ ನಾಡಿನ ಜನತೆ ದುಃಖದಲ್ಲಿ ಮುಳುಗಿದ್ದಾರೆ. ರಾಜ್ಯ ಸರ್ಕಾರ ಒಂದು ದಿನದ ರಜೆ ಹಾಗೂ ಮೂರು ದಿನದ ಶೋಕಾಚರಣೆ ಘೋಷಿಸಿದೆ. ಮತ್ತೂಂದು ಕಡೆ ಸಮಾಜ ಕಲ್ಯಾಣ ಇಲಾಖೆಯಿಂದ ಪಂಚತಾರಾ ಹೋಟೆಲ್‌ನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಿ ವಿಚಾರ ಸಂಕಿರಣ ನಡೆಸುತ್ತಿದೆ ಎಂದು ದೂರಿದರು.
ಶೋಕಾಚರಣೆ ಇದ್ದರೂ ಕನ್ನಯ್ಯ ಕುಮಾರ, ಅಸಾದುದ್ದೀನ್ ಓವೈಸಿ ಅವರನ್ನು ಕರೆಯಿಸಿ ವಿಚಾರ ಸಂಕಿರಣ ಆಯೋಜಿಸಿರುವುದು ಸಂವಿಧಾನ ವಿರೋಧಿ ಮತ್ತು ಸಿದ್ಧಗಂಗಾ ಶ್ರೀಗಳಿಗೆ ಮಾಡಿರುವ ಅವಮಾನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿಚಾರ ಸಂಕಿರಣವನ್ನು ಕೂಡಲೇ ರದ್ದುಪಡಿಸಬೇಕು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆಯವರು ರಾಜೀನಾಮೆ ನೀಡಬೇಕು. ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಲಬುರಗಿಯಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಮಾಡಿ ವಿಧಾನಸೌಧ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಳಗದ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸರಡಗಿ ಚಿಕ್ಕಮಠದ ಶ್ರೀಗಳು, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ, ಗುರುಶಾಂತ ಟೆಂಗಳಿ, ಲಕ್ಷ್ಮೀಕಾಂತ ಸ್ವಾಧಿ, ಸಂತೋಷ ಬೆನಕನಳ್ಳಿ, ಸಿದ್ದು ಅಂಬಲಗಿ, ಅಮೃತ ಸ್ವಾಮಿ, ರಾಜಶೇಖರ ಬಂಡೆ, ಪ್ರತೀಕ ಕ್ಷ್ಮೀರಸಾಗರ, ಮಲ್ಲಿಕಾರ್ಜುನ ವಾರದ, ಬಸವರಾಜ ಹಂಗರಗಿ, ಉಮೇಶ ರೋಜಾ, ಮಲ್ಲು ಚಿಂಚನಸೂರ, ನಾಗರಾಜ ವೀರಭದ್ರಪ್ಪ ಡೊಂಗರಗಾಂವ, ಪ್ರಕಾಶ ರೋಜಾ ಇತರರು ಪಾಲ್ಗೊಂಡಿದ್ದರು.