ನಟಿ ಪ್ರಿಯಾಮಣಿ ಅವರ ನಟನೆಯನ್ನು ಇಷ್ಟಪಡುವವರು ತುಂಬಾ ಜನರಿದ್ದಾರೆ. ನಾನು ಕೂಡ ಬೆಳ್ಳಿತೆರೆಯಲ್ಲಿ ಅವರ ನಟನೆಯನ್ನು ಇಷ್ಟಪಡುತ್ತೇನೆ. ಆದರೆ, ಅವರು ನನಗೆ ಹೆಚ್ಚು ಇಷ್ಟವಾಗಿದ್ದು ವೈಟ್ ಎಂಬ ಮಿನಿಚಿತ್ರದಲ್ಲಿ.
ಇಡೀ ಚಿತ್ರದಲ್ಲಿರುವುದು ಎರಡೇ ಪಾತ್ರ. ಆದರೆ, ಅದು ಕೊಡುವ ಸಂದೇಶ ಮಹತ್ವದ್ದು. ಸಂದೇಶವನ್ನು ಸ್ವೀಕರಿಸುವ ಮನಸ್ಥಿತಿಯನ್ನೂ ಈ ಚಿತ್ರ ಸೃಷ್ಟಿಸುತ್ತದೆ. ಲ್ಯಾಬ್ರಡಾರ್ ನಾಯಿಯ ಜೊತೆಗೆ ಬೆಟ್ಟದ ಮೇಲೆ ದಿನವೂ ವಾಕಿಂಗ್ ಹೋಗುವ ಸುಂದರಿಯ ಕೈಯಲ್ಲೊಂದು ಕೋಲು ಇರುತ್ತದೆ. ಸದಾ ನಾಯಿಯೇ ಆಕೆಯನ್ನು ಕರೆದುಕೊಂಡು ಮುಂದೆ ಮುಂದೆ ಹೋಗುತ್ತದೆ. ಮುಂಜಾನೆ ಬೆಟ್ಟವನ್ನು ಏರುತ್ತ ಸಾಗುವ ಈ ದೃಶ್ಯವನ್ನು ಅತ್ಯಂತ ಸುಂದರ ವಾಗಿ ಕೆಮರಾ ಸೆರೆ ಹಿಡಿದಿದೆ. ಸೂರ್ಯನ ಕಿರಣಗಳು, ಬೆಟ್ಟದಿಂದ ಕಾಣುವ ಹಸಿರ ಸೊಬಗು, ಆ ಹಸಿರಿಗೆ ಮುತ್ತಿಕ್ಕುವ ಮೋಡಗಳು, ಮಂಜಿನ ಹನಿಗಳ ಚೆಲ್ಲಾಟ… ಎಲ್ಲವೂ ಬಹಳ ಸುಂದರವಾಗಿದೆ.
ಒಂದು ದಿನ ಬೆಟ್ಟದ ಮೇಲೆ ಆಕೆಯ ನಾಯಿ ಕಾಣೆಯಾಗುತ್ತದೆ. ಆ ನಾಯಿಯನ್ನು ಹುಡುಕುವಾಗ, ಕೈಯಿಂದ ಆ ಕೋಲೂ ಕೆಳಕ್ಕೆ ಬೀಳುತ್ತದೆ. ಚಿತ್ರದ ನಾಯಕಿಗೆ ಕಣ್ಣು ಕಾಣುವುದಿಲ್ಲ ಎಂಬುದು ಆಗಲೇ ಪ್ರೇಕ್ಷಕರಿಗೆ ಅರಿವಾಗುವುದು. ಕೋಲಿನಿಂದ ಕೇವಲ ಐದಾರು ಸೆಂ.ಮೀ. ಅಂತರದಲ್ಲೇ ಆಕೆಯ ಕೈ ಇದ್ದರೂ, ಆಕೆಗೆ ಕೋಲು ಸಿಗುವುದಿಲ್ಲ. ಆಕೆಗೆ ಆಸರೆಯಾಗಿದ್ದ ಮೊದಲ ಜೀವ ನಾಯಿ ಕಾಣೆಯಾಗಿದೆ. ಎರಡನೆಯ ಆಸರೆ ಕೋಲೂ ಕೈಯಿಂದ ಜಾರಿದೆ. ಅಲ್ಲಿ ಕುಸಿದು ಕುಳಿತ ಆಕೆ ಸಹಾಯಕ್ಕಾಗಿ ಕಿರುಚುತ್ತಾಳೆ.
ಮತ್ತೆ ನಾಯಿ ಬಂದು ಆಕೆಗೆ ಕೋಲು ಎತ್ತಿಕೊಡುವ ದೃಶ್ಯವು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. ಕೊನೆಯಲ್ಲಿ “ನೇತ್ರದಾನ’ದ ಮಹತ್ವವನ್ನು ಬೆಂಬಲಿಸಿ ಅಮಿತಾಭ್ ಬಚ್ಚನ್ ನೀಡುವ ಸಂದೇಶವಿದೆ. ಆ ಧ್ವನಿಯೂ ಚೆನ್ನಾಗಿದೆ. ಮನು ನಾಗ್ ನಿರ್ದೇಶನಕ್ಕೆ ಹ್ಯಾಟ್ಸ್ ಆಫ್ ಅನ್ನಲೇಬೇಕು.
(ನೋಡಿ : https://www.youtube.com/watch?v=91zBwrJuLAw)
ಕಿರಣ್ ಕುಮಾರ್ ಕಣ್ಣೂರು