Advertisement
ಮಂಗಳೂರು ವಿಮಾನ ನಿಲ್ದಾಣವನ್ನು ಹೊರಗುತ್ತಿಗೆ ಪಡೆದುಕೊಂಡು ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವುದಕ್ಕೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಸಿಐಎಎಲ್) ಕೂಡ ಒಲವು ವ್ಯಕ್ತಪಡಿಸಿದ್ದು, ಬಿಡ್‌ನಲ್ಲಿ ಪಾಲ್ಗೊಂಡಿದೆ. ಉನ್ನತ ಮೂಲಗಳ ಪ್ರಕಾರ ಮಂಗಳೂರು ಸಹಿತ ದೇಶದ ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವುದಕ್ಕೆ ಫೆ.14ರಿಂದ ಬಿಡ್ ಓಪನ್ ಆಗಿದೆ. ಇಲ್ಲಿಯ ವರೆಗೆ ಒಟ್ಟು ಮೂರು ಖಾಸಗಿ ಕಂಪೆನಿಗಳು ಮಂಗಳೂರು ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದುಕೊಂಡು ಅಭಿವೃದ್ಧಿಪಡಿಸುವುದಕ್ಕೆ ಮುಂದೆ ಬಂದಿವೆ. ಹೊಸದಿಲ್ಲಿ ಹಾಗೂ ಹೈದರಾಬಾದ್‌ನಂಥ ಕೆಲವು ಪ್ರಮುಖ ವಿಮಾನ ನಿಲ್ದಾಣಗಳ ನಿರ್ವಹಣೆ ನೋಡಿಕೊಳ್ಳುತ್ತಿರುವ ಜಿಎಂಆರ್ ಗ್ರೂಪ್ ಈಗ ಮಂಗಳೂರು ನಿಲ್ದಾಣವನ್ನು ಗುತ್ತಿಗೆ ವಹಿಸಿಕೊಳ್ಳುವುದಕ್ಕೆ ಬಿಡ್‌ನಲ್ಲಿ ಪಾಲ್ಗೊಂಡಿದೆ. ಪ್ರತಿಷ್ಠಿತ ಅದಾನಿ ಎಂಟರ್‌ಪ್ರೈಸಸ್ ಹಾಗೂ ಸಿಐಎಎಲ್ ಕೂಡ ಬಿಡ್‌ನಲ್ಲಿ ಪಾಲ್ಗೊಂಡಿವೆ ಎನ್ನಲಾಗಿದೆ.
ಮಂಗಳೂರು ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದುಕೊಂಡು ಅಭಿವೃದ್ಧಿಪಡಿಸುವುದಕ್ಕೆ ನೆರೆಯ ರಾಜ್ಯವಾಗಿರುವ ಕೇರಳದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳುತ್ತಿರುವ ಸಿಐಎಎಲ್ ಆಸಕ್ತಿ ವಹಿಸಿರುವುದು ಕುತೂಹಲ ಮೂಡಿಸಿದೆ. ಕೇರಳದಲ್ಲಿ ಈಗ ಒಟ್ಟು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದು, ಇತ್ತೀಚೆಗಷ್ಟೇ ಮಂಗಳೂರಿಗೆ ಸ್ಪರ್ಧಿಯಾಗುವ ರೀತಿಯಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಕಾರ್ಯಾರಂಭಿಸಿದೆ. ಹೀಗಾಗಿ ಸಿಐಎಎಲ್ ಈಗ ಪಾಲ್ಗೊಂಡಿರುವುದು ವಿಶೇಷ. ಬಿಡ್‌ನಲ್ಲಿ ಭಾಗವಹಿಸಿದವರ ಪೈಕಿ ಯಾರು ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ ಎನ್ನುವುದು ಫೆ.26ಕ್ಕೆ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.