Advertisement

ಖಾಸಗೀಕರಣ ಪ್ರಭಾವ; ಎಪಿಎಂಸಿಗೆ ಧನಾಭಾವ!

06:46 PM Oct 09, 2020 | Suhan S |

ರಾಯಚೂರು: ರೈತರ ಹಿತದೃಷ್ಟಿಯಿಂದ ಸರ್ಕಾರ ಎಪಿಎಂಸಿಗಳ ಖಾಸಗೀಕರಣ ಮಾಡಿ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ ಇದರಿಂದ ರೈತರಿಗೆ ಅನುಕೂಲ ಆಗಿದೆಯೋಇಲ್ಲವೋ ಎಪಿಎಂಸಿ ಆದಾಯಕ್ಕೆ ಮಾತ್ರ ಗಣನೀಯ ಪ್ರಮಾಣದಲ್ಲಿ ಕೊಕ್ಕೆ ಬಿದ್ದಿದೆ.

Advertisement

ರೈತರ ಉತ್ಪನ್ನಗಳ ಮೇಲೆ ಮಾರುಕಟ್ಟೆ ಶುಲ್ಕ ವಿಧಿಸಿ ಅದರಿಂದ ಬರುತ್ತಿದ್ದ ಆದಾಯದಲ್ಲೇ ಎಪಿಎಂಸಿ ನಿರ್ವಹಣೆಮಾಡಲಾಗುತಿತ್ತು. ಈಗ ಶೇ.80ಕ್ಕಿಂತ ಹೆಚ್ಚು ಆದಾಯ ಕೈ ತಪ್ಪಿದೆ ಎನ್ನುತ್ತಾರೆ ಅಧಿ ಕಾರಿಗಳು. ಮೇ 20ರ ಬಳಿಕ ಸರ್ಕಾರ ರೈತರಿಗೆ ಮುಕ್ತ ಮಾರುಕಟ್ಟೆ ಒದಗಿಸುವನಿಟ್ಟಿನಲ್ಲಿ ಎಪಿಎಂಸಿ ಖಾಸಗೀಕರಣಮಸೂದೆ ಜಾರಿ ಮಾಡಿದೆ. ಇದರಿಂದಎಪಿಎಂಸಿ ಹೊರತಾಗಿಸಿ ಬೇರೆಡೆ ವಹಿವಾಟು ಹೆಚ್ಚಾಗಿದೆ. ಈ ಮುಂಚೆ ಎಪಿಎಂಸಿಗೆ ವಾರ್ಷಿಕ 18 ಕೋಟಿ ರೂ.ಗಿಂತ ಅಧಿಕ ಮಾರುಕಟ್ಟೆ ಶುಲ್ಕ ಸಂಗ್ರಹವಾಗುತ್ತಿತ್ತು. ಈಗ ಅದು 3 ಕೋಟಿ ಬಂದರೆ ಹೆಚ್ಚು ಎನ್ನುವುದು ಅಧಿಕಾರಿಗಳ ವಿವರಣೆ.

ಭತ್ತ, ಹತ್ತಿ, ಮೆಣಸಿನಕಾಯಿ ಪ್ರಧಾನ: ಎಪಿಎಂಸಿಗೆ ಮುಖ್ಯವಾಗಿ ಆದಾಯ ತಂದು ಕೊಡುತ್ತಿದ್ದ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಗಳೇ ಬಾರದಂತಾಗಿದೆ. ಎಪಿಎಂಸಿಯಿಂದ ಪರವಾನಗಿ ಪಡೆದು ಕೋಲ್ಡ್‌ ಸ್ಟೋರೇಜ್‌ ಗಳಲ್ಲಿ ವ್ಯಾಪಾರ-ವಹಿವಾಟು ಮಾಡುತ್ತಿದ್ದ ವರ್ತಕರು ಈಗ ನೇರವಾಗಿ ಮಾಡುತ್ತಾರೆ.

ಅವರಿಂದ ಈಗ ಎಪಿಎಂಸಿಗೆ ನಯಾಪೈಸೆ ಶುಲ್ಕ ಪಾವತಿಯಾಗುತ್ತಿಲ್ಲ. ರಾಯಚೂರು ಎಪಿಎಂಸಿಯಲ್ಲಿ 16 ಪ್ಲಾಟ್‌ ಫಾರ್ಮ್ ಗಳಿದ್ದು, 225 ವ್ಯಾಪಾರ ಮಳಿಗೆಗಳಿವೆ. ಅಂದಾಜಿನ ಪ್ರಕಾರ ಈ ಮೂರು ಬೆಳೆಗಳಿಂದ ಎಪಿಎಂಸಿಗೆ ಬರೋಬ್ಬರಿ 10 ಕೋಟಿಗೂ ಅಧಿಕ ಆದಾಯ ಬರುತ್ತಿತ್ತು. ಎಪಿಎಂಸಿಗೆ ಹೊರಗೆ ವಹಿವಾಟು ನಡೆದರೆ ಶುಲ್ಕ ಕಟ್ಟುವಂತಿಲ್ಲ ಎನ್ನುವ ಕಾರಣಕ್ಕೆ ವರ್ತಕರಿಗೆ ಈಗ ಅದರ ಗೊಡವೆ ತಪ್ಪಿದೆ.

35 ಪೈಸೆ ಮಾತ್ರ ಶುಲ್ಕ: ಈ ಮುಂಚೆ ಮಾರುಕಟ್ಟೆ ಶುಲ್ಕ 100ಕ್ಕೆ 1.50 ಪೈಸೆ ಇತ್ತು. ಈಗ ಅದನ್ನು 35 ಪೈಸೆಗೆ ನಿಗದಿ ಮಾಡಲಾಗಿದೆ. ಅದರಲ್ಲಿ ಸರ್ಕಾರ ಆವರ್ತ ನಿಧಿ  ಕಡಿತಗೊಳಿಸಿ ಎಪಿಎಂಸಿಗೆ ಕೇವಲ 14 ಪೈಸೆ ಮಾತ್ರ ನೀಡುತ್ತದೆ. ಇದರಿಂದ ಆದಾಯ ಕುಗ್ಗಿದ್ದು, ನಿರ್ವಹಣೆ ಸವಾಲು ಎದುರಾಗಿದೆ. ಈ ಕಾರಣಕ್ಕೆ ಆಡಳಿತ ಮಂಡಳಿ ಖರ್ಚುಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

Advertisement

ಆದಾಯ ಹೆಚ್ಚಳಕ್ಕೆ ಯತ್ನ: ಈಗ ಮಾರುಕಟ್ಟೆ ಶುಲ್ಕದಿಂದ ಆದಾಯ ಕುಸಿದ ಪರಿಣಾಮ ಸ್ಥಳೀಯ ಮಟ್ಟದಲ್ಲಿಯೇ ಆದಾಯ ಹೆಚ್ಚಿಸಿಕೊಳ್ಳಲು ಆಡಳಿತ ಮಂಡಳಿ ನಾನಾ ಪ್ರಯತ್ನ ನಡೆಸಿದೆ. ಈಗಿರುವಆಸ್ತಿಗಳಿಂದ ಪಾಸ್ತಿಗಳನ್ನೇ ಸಮರ್ಪಕವಾಗಿ ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಖಾಲಿ ಇದ್ದ ಮಳಿಗೆಗಳ ಬಾಡಿಗೆಗಾಗಿ ಟೆಂಡರ್‌ ಕರೆಯಲಾಗಿದೆ. ಅನಗತ್ಯವಾಗಿ ವಿದ್ಯುತ್‌ ಬಳಸುತ್ತಿದ್ದಲ್ಲಿ ಅಂಥ ಕಡೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. 3 ಲಕ್ಷ ರೂ. ಬರುತ್ತಿದ್ದ ವಿದ್ಯುತ್‌ ಬಿಲ್‌ಈಗ 1.80 ಲಕ್ಷ ರೂ.ವರೆಗೆ ಬಂದು ನಿಂತಿದೆ. 96 ಸೆಕ್ಯುರಿಟಿ ಗಾರ್ಡ್‌ಗಳಲ್ಲಿ 60 ಜನರನ್ನು ತೆಗೆಯಲಾಗಿದೆ. ಕಂಪ್ಯೂಟರ್‌ ಆಪರೇಟರ್‌, ಸಹಾಯಕರು ಸೇರಿದಂತೆ ವಿವಿಧ ಹುದ್ದೆ ಕಡಿತಗೊಳಿಸಲಾಗಿದೆ.

ಎಪಿಎಂಸಿ ಖಾಸಗೀಕರಣದಿಂದ ರೈತರಿಗೆ ಎಷ್ಟು ಅನುಕೂಲವಾಗಿದೆಯೋ ಅಷ್ಟೇ ಅನಾನುಕೂಲವಾಗಿದೆ. ಹೊರಗೆ ವರ್ತಕರು ಧಾನ್ಯ ಖರೀದಿಸಿ ಹಣ ಪಾವತಿಸದೇ ಪರಾರಿಯಾಗುತ್ತಾರೆ. ಅಲ್ಲದೇ ಎಪಿಎಂಸಿ ವರ್ತಕರಿಗೂ ಭಾರೀ ಪ್ರಮಾಣದ ಹೊಡೆತ ಬಿದ್ದಿದೆ. -ಬೆಲ್ಲಂ ನರಸರೆಡ್ಡಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ

ಎಪಿಎಂಸಿ ಖಾಸಗೀಕರಣದಿಂದ ಮಾರುಕಟ್ಟೆ ಶುಲ್ಕ ಸಂಗ್ರಹದಲ್ಲಿ ಸಾಕಷ್ಟು ಇಳಿಕೆಯಾಗಿದೆ. ಆದಾಯದ ಶೇ.25 ಆದಾಯದಲ್ಲಿ ಎಪಿಎಂಸಿ ಅಭಿವೃದ್ಧಿಗೆ ಅವಕಾಶವಿತ್ತು. ಆದರೆ, ಈಗ ಬರುವ ಆದಾಯದಲ್ಲಿ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ನಮ್ಮ ಆದಾಯ ಹೆಚ್ಚಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. – ರಂಗನಾಥ ದೇಸಾಯಿ, ಎಪಿಎಂಸಿ ಕಾರ್ಯದರ್ಶಿ

 

-ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next