ಸುವರ್ಣ ವಿಧಾನಸೌಧ: ನೂತನವಾಗಿ 6 ಖಾಸಗಿ ವಿಶ್ವವಿದ್ಯಾಲಯ ರಚನೆಗೆ ತರಾತುರಿಯಲ್ಲಿ ಹೊರಟಿದ್ದ ಸರಕಾರಕ್ಕೆ ಕಲಾಪದಲ್ಲಿ ಸ್ವಪಕ್ಷೀಯ ಶಾಸಕರಿಂದಲೇ ಬಲವಾದ ವಿರೋಧ ವ್ಯಕ್ತವಾಯಿತು. ಖಾಸಗಿ ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ, ಹಾಗಿರುವಾಗ ವಿಧೇಯಕದಲ್ಲಿರುವ ಅಂಶಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡದೆ, ಆ ಬಗ್ಗೆ ಚರ್ಚೆಯನ್ನೂ ಮಾಡದೆ ಅನುಮೋದಿಸುವುದು ಸದನದ ಗೌರವಕ್ಕೆ ಅಪಚಾರವಾದಂತೆ ಎಂದು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಧೇಯಕಗಳನ್ನು ಹಿಂಪಡೆಯಬೇಕಾಗಿ ಬಂತು.
ವಿಧಾನಸಭೆಯಲ್ಲಿ ಗುರುವಾರ ಮಧ್ಯಾಹ್ನ ಸದಸ್ಯರ ಹಾಜರಾತಿ ಕಡಿಮೆ ಇರುವಾಗಲೇ ಕಾರ್ಯಕಲಾಪದ ಪಟ್ಟಿಯಂತೆಯೇ 6 ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕವನ್ನು ಉನ್ನತ ಶಿಕ್ಷಣ ಸಚಿವ ಡಾ|ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಡಿಸಿದರು. ವಿಧಾನ ಪರಿಷತ್ತಿನಲ್ಲೂ ಇದಕ್ಕೆ ಅನುಮೋದನೆ ಸಿಗುವ ಭರವಸೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಚಿವರು ಮನದಟ್ಟು ಮಾಡಿದ್ದರು.
ಜಿ.ಎಂ.ವಿಶ್ವವಿದ್ಯಾಲಯ, ಕಿಷ್ಕಿಂಧ ವಿಶ್ವವಿದ್ಯಾಲಯ, ಆಚಾರ್ಯ ವಿಶ್ವವಿದ್ಯಾಲಯ, ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ ಹಾಗೂ ಟಿ.ಜಾನ್ ವಿಶ್ವವಿದ್ಯಾಲಯಗಳ ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಯಿತು. ಈ ವೇಳೆ ಮಾತನಾಡಿದ ಸಚಿವರು, ಸರಕಾರಕ್ಕೆ ವಿಶ್ವವಿದ್ಯಾಲಯಗಳ ಮೇಲೆ ಯಾವುದೇ ಹಣಕಾಸಿನ ಬಾಧ್ಯತೆಗಳು ಇರುವುದಿಲ್ಲ, ಶೇ.40ರಷ್ಟು ಸೀಟುಗಳನ್ನು ಸರಕಾರಕ್ಕೆ ನೀಡುತ್ತಾರೆ ಹಾಗೂ ಉಳಿದ ಶೇ.60 ಸೀಟುಗಳನ್ನು ಶುಲ್ಕ ನಿಯಂತ್ರಣ ಸಮಿತಿ ಮೂಲಕ ತುಂಬುತ್ತಾರೆ, ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮೂಲಕ ಕಾಲೇಜುಗಳಿಗೆ ಸ್ವಾಯತ್ತತೆ ನೀಡಬಹುದು, ಆ ಮೂಲಕ ಹೊಸ ಹೊಸ ಕೋರ್ಸ್‌ಪ್ರಾರಂಭಿಸುವುದು ಸಾಧ್ಯವಾಗಲಿದೆ ಎಂದು ಹೇಳಿದರು.
ವಿಧೇಯಕದ ಮಂಜೂರಾತಿ ಪಡೆಯುವ ಹೊತ್ತಿನಲ್ಲಿ ಹಲವು ಸದಸ್ಯರು ಆಗಮಿಸಿದ್ದರು. ಆರಂಭದಲ್ಲಿ ಸ್ಪೀಕರ್ ಅವರೇ ಸಾಕಷ್ಟು ಎಂಜಿನಿಯರಿಂಗ್ ಕಾಲೇಜುಗಳು ಈಗಾಗಲೇ ಇರುವಾಗ ಹೊಸ ಹೊಸ ವಿವಿಗಳು ಅದೇ ಕೋರ್ಸ್ ನೀಡುವುದರಲ್ಲಿ ಇನ್ನಷ್ಟು ಪದವೀಧರರನ್ನು ಸೃಷ್ಟಿಸುವಲ್ಲಿ ಅರ್ಥವಿದೆಯಾ ಎಂದರು.
ಬಳಿಕ ಮಾತನಾಡಿದ ಎಚ್.ಕೆ.ಪಾಟೀಲ್, 6 ಹೊಸ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸುವುದು ಎಂದರೆ ಗಂಭೀರ ವಿಚಾರ. 10 ನಿಮಿಷದಲ್ಲಿ ಇವುಗಳನ್ನೆಲ್ಲ ಅನುಮೋದಿಸುವುದು ಸದನದ ಘನತೆಗೆ ಕುಂದುಂಟು ಮಾಡಿದಂತೆ. ಅಷ್ಟು ತುರ್ತು ಇದ್ದಲ್ಲಿ ಹಿಂಪಡೆದು ಸುಗ್ರೀವಾಜ್ಞೆ ಹೊರಡಿಸಿ, ಮುಂದೆ ವಿಸ್ತ್ರತವಾಗಿ ಕಲಾಪದಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್, ಈ ಬಗ್ಗೆ ಸುದೀರ್ಘ ಚರ್ಚೆ ಆಗಬೇಕು ಎಂದರು.
ಬಿಜೆಪಿಯ ವೀರಣ್ಣ ಚರಂತಿಮಠ ಅವರು, ಸರಕಾರದ ಮುದ್ರೆ ಇದ್ದರೆ ಮಾತ್ರವೇ ವಿವಿಗಳಿಗೆ ಮೌಲ್ಯ. ಖಾಸಗಿ ವಿವಿ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದರು. ಅರವಿಂದ ಲಿಂಬಾವಳಿ ಮಾತನಾಡಿ, ಖಾಸಗಿ ವಿವಿ ಮೇಲೆ ಗವರ್ನರ್, ಉನ್ನತ ಶಿಕ್ಷಣ ಸಚಿವರಿಗೆ ಯಾವುದೇ ಹತೋಟಿ ಇರುವುದಿಲ್ಲ, ಅಧಿಕಾರ ಇಲ್ಲದೇ ಹೋದರೆ ಮುಂದೆ ಸಮಸ್ಯೆಯಾಗಬಹುದು. ಈ ಬಗ್ಗೆ ಇನ್ನೂ ಚರ್ಚೆ ಆಗಬೇಕು, ಅನೇಕ ಅಂಶಗಳ ಸೇರ್ಪಡೆಯಾಗಬೇಕು ಎಂದರು.
ಇದಕ್ಕೆ ಉತ್ತರ ನೀಡಲು ಹೊರಟ ಅಶ್ವತ್ಥನಾರಾಯಣ ಅವರನ್ನು ಸ್ಪೀಕರ್ ತಡೆದು, ಈ ವಿಧೇಯಕಗಳಿಗೆ ಪರಿಷತ್‌ನಲ್ಲೂ ಅಂಗೀಕಾರ ದೊರೆಯುತ್ತಿಲ್ಲ, ಹಾಗಾಗಿ ನಾವು ಮಾತ್ರ ಅಂಗೀಕಾರ ನೀಡಿ ಪ್ರಯೋಜನವಿಲ್ಲ ಎಂದರು, ಮುಂದೆ ಅಗತ್ಯವಿದ್ದರೆ ಸುಗ್ರೀವಾಜ್ಞೆ ಹೊರಡಿಸಿ. ಈಗ ಮಂಡಿಸಿರುವ ವಿಧೇಯಕಗಳನ್ನು ಹಿಂದಕ್ಕೆ ಪಡೆಯಿರಿ ಎಂಬ ಸಚಿವ ಮಾಧುಸ್ವಾಮಿ ಸಲಹೆಯಂತೆ ವಿಧೇಯಕಗಳನ್ನು ಹಿಂದಕ್ಕೆ ಪಡೆಯಲಾಯಿತು.