Advertisement

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ಅವಕಾಶ 

10:35 PM Feb 24, 2021 | Team Udayavani |

ಮುಂಬೈ: ಇನ್ನು ಮಂದೆ  ಖಾಸಗಿ ಬ್ಯಾಂಕುಗಳು ಕೂಡ ಸರ್ಕಾರಕ್ಕೆ ಸಂಬಂಧಿಸಿದ ಬ್ಯಾಂಕಿಂಗ್‌ ವಹಿವಾಟುಗಳನ್ನು ನಡೆಸಬಹುದಾಗಿದೆ. ಈವರೆಗೆ ಇಂಥ ವಹಿವಾಟುಗಳನ್ನು ನಡೆಸಲು ಖಾಸಗಿ ಬ್ಯಾಂಕುಗಳಿಗೆ ಇದ್ದ ನಿರ್ಬಂಧವನ್ನು ಈಗ ಕೇಂದ್ರ ಸರ್ಕಾರ ತೆರವುಗೊಳಿಸಿದೆ.

Advertisement

ಇದರಿಂದಾಗಿ, ತೆರಿಗೆಗಳು, ಇತರೆ ಕಂದಾಯ ಪಾವತಿ ವ್ಯವಸ್ಥೆಗಳು, ಪಿಂಚಣಿ ಪಾವತಿ, ಸಣ್ಣ ಉಳಿತಾಯ ಯೋಜನೆಗಳು ಮತ್ತಿತರ ಸರ್ಕಾರ ಸಂಬಂಧಿ ವಹಿವಾಟುಗಳನ್ನು ನಡೆಸಲು ಎಲ್ಲ ಖಾಸಗಿ ಬ್ಯಾಂಕುಗಳಿಗೂ ಮುಕ್ತ ಅವಕಾಶ ನೀಡಿದಂತಾಗಿದೆ. ಈವರೆಗೆ ಕೆಲವೇ ಕೆಲವು ಖಾಸಗಿ ಬ್ಯಾಂಕುಗಳಿಗಷ್ಟೇ ಈ ಅವಕಾಶವಿತ್ತು. ಆದರೆ, ಈಗ ನಿರ್ಬಂಧವನ್ನು ತೆರವುಗೊಳಿಸಿರುವ ಕಾರಣ, ಎಲ್ಲ ಖಾಸಗಿ ವಲಯದ ಬ್ಯಾಂಕುಗಳು ಕೂಡ ದೇಶದ ಆರ್ಥಿಕತೆ, ಸಾಮಾಜಿಕ ವಲಯದ ಅಭಿವೃದ್ಧಿಯಲ್ಲಿ ಕೈಜೋಡಿಸಬಹುದಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಹೇಳಿದ್ದಾರೆ.

ಜತೆಗೆ, ಈ ನಿರ್ಧಾರದಿಂದಾಗಿ ಗ್ರಾಹಕರಿಗೆ ಅನುಕೂಲವಾಗಲಿದ್ದು, ಸ್ಪರ್ಧೆಯೂ ಹೆಚ್ಚುತ್ತದೆ ಮತ್ತು ಗ್ರಾಹಕ ಸೇವಾ ಗುಣಮಟ್ಟದಲ್ಲಿ ಹೆಚ್ಚಿನ ದಕ್ಷತೆ ಮೂಡಲು ಸಾಧ್ಯ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ:ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಷೇರುಪೇಟೆಗೆ ವರದಾನ; ಸೆನ್ಸೆಕ್ಸ್‌ ಜಿಗಿತ
ಸರ್ಕಾರಿ ವಹಿವಾಟು ನಡೆಸಲು ಖಾಸಗಿ ಬ್ಯಾಂಕುಗಳಿಗಿದ್ದ ನಿರ್ಬಂಧ ತೆರವಾಗಿದ್ದು ಬುಧವಾರ ಮುಂಬೈ ಷೇರುಪೇಟೆಯಲ್ಲಿ ಮಿಂಚಿನ ಸಂಚಲನ ಉಂಟುಮಾಡಿತು. ಬ್ಯಾಂಕಿಂಗ್‌ ಹಾಗೂ ಹಣಕಾಸು ಕ್ಷೇತ್ರಗಳ ಖರೀದಿ ಭರಾಟೆಯಲ್ಲಿ ಹೂಡಿಕೆದಾರರು ತೊಡಗಿದ ಕಾರಣ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,030.28 ಅಂಕಗಳ(ಶೇ.2.07) ಏರಿಕೆ ದಾಖಲಿಸಿ, ದಿನಾಂತ್ಯಕ್ಕೆ 50,781.69ರಲ್ಲಿ ವಹಿವಾಟು ಕೊನೆಗೊಳಿಸಿತು. ನಿಫ್ಟಿ 274.20 ಅಂಕಗಳಷ್ಟು ಹೆಚ್ಚಳವಾಗಿ, 14,982ರಲ್ಲಿ ಅಂತ್ಯಗೊಂಡಿತು. ಸೆನ್ಸೆಕ್ಸ್‌ ಪ್ಯಾಕ್‌ನಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌ ಅತಿ ಹೆಚ್ಚು ಲಾಭ ಗಳಿಸಿದರೆ, ಎಚ್‌ಡಿಎಫ್ಸಿ ಬ್ಯಾಂಕ್‌, ಎಚ್‌ಡಿಎಫ್ಸಿ, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌ ಮತ್ತು ಎಸ್‌ಬಿಐ ಷೇರು ಮೌಲ್ಯಗಳೂ ಜಿಗಿತ ಕಂಡವು.

Advertisement

ತಾಂತ್ರಿಕ ದೋಷದಿಂದ ತೊಂದರೆ
ಬುಧವಾರ ವಹಿವಾಟು ಆರಂಭವಾದ ಬಳಿಕ ನ್ಯಾಷನಲ್‌ ಸ್ಟಾಕ್‌ ಎಕ್ಸ್ಚೇಂಜ್‌(ಎನ್ಎಸ್‌ಇ)ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ವಹಿವಾಟನ್ನು ಅರ್ಧಕ್ಕೇ ಸ್ಥಗಿತಗೊಳಿಸಬೇಕಾದ ಸ್ಥಿತಿ ಎದುರಾಯಿತು. ಇನ್ನೇನು ಮಧ್ಯಾಹ್ನ 3.30ಕ್ಕೆ ಎಂದಿನಂತೆ ವಹಿವಾಟಿನ ಅವಧಿ ಮುಗಿಯುತ್ತದೆ ಎಂದುಕೊಳ್ಳುವಾಗಲೇ, ಅವಧಿಯನ್ನು ಸಂಜೆ 5 ಗಂಟೆಯವರೆಗೆ ವಿಸ್ತರಿಸುತ್ತಿರುವುದಾಗಿ ಬಿಎಸ್‌ಇ ಮತ್ತು ಎನ್ಎಸ್‌ಇ ಘೋಷಿಸಿತು.

ಚಿನ್ನದ ದರ ಇಳಿಕೆ
ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ದರ 148 ರೂ. ಇಳಿಕೆಯಾಗಿ, 10 ಗ್ರಾಂಗೆ 46,307 ರೂ. ಆಗಿದೆ. ಬೆಳ್ಳಿ ದರ 886 ರೂ. ಕಡಿಮೆಯಾಗಿ ಕೆಜಿಗೆ 68,676 ರೂ.ಗೆ ತಲುಪಿದೆ. ಈ ನಡುವೆ, ಡಾಲರ್‌ ಎದುರು ರೂಪಾಯಿ ಮೌಲ್ಯ 11 ಪೈಸೆ ಏರಿಕೆಯಾಗಿ 72.35ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next