Advertisement

ಖಾಸಗಿ ಶಾಲೆಗಳು ಆಂಗ್ಲ ಸಂಸ್ಕೃತಿ ಬಿತ್ತುತ್ತಿವೆ

12:58 PM Sep 23, 2018 | |

ಬೆಂಗಳೂರು: ಬಹುತೇಕ ಖಾಸಗಿ ಶಾಲೆಗಳು ಕನ್ನಡ ಭಾಷಾ ಸಂಸ್ಕೃತಿ ಬದಲಾಗಿ ಆಂಗ್ಲ ಸಂಸ್ಕೃತಿಯನ್ನು ವಿಧ್ಯಾರ್ಥಿಗಳಲ್ಲಿ ಬಿತ್ತುತ್ತಿವೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

Advertisement

ಇಂದಿರಾನಗರದ ಭಾರತಿ ವೃಂದ ಸಭಾಂಗಣದಲ್ಲಿ ಸರ್‌.ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಕಡೆ ಖಾಸಗಿ ವಲಯ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಆವರಿಸಿಕೊಳ್ಳುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಪಾಠ, ಪದ್ಯದಿಂದ ಹಿಡಿದು ಎಲ್ಲವನ್ನೂ ಆಂಗ್ಲಭಾಷೆಯಲ್ಲಿಯೇ ಮಾಡಿ, ಅದರಲ್ಲಿಯೇ ಮಾತನಾಡಲು ಸೂಚಿಸುತ್ತಾರೆ. ಇದು ಕನ್ನಡಕ್ಕೆ ವಿರುದ್ಧವಾದ ಸಂಸ್ಕೃತಿಯಾಗಿದೆ ಎಂದು ಹೇಳಿದರು.

ಇಂದು ಹುಟ್ಟಿನಿಂದ ಚಟ್ಟದವರೆಗೆ ಎಲ್ಲವೂ ಇಂಗ್ಲಿಷ್‌ ಮಯವಾಗಿದೆ. ಮಕ್ಕಳಿಗೆ ಇಂಗ್ಲಿಷ್‌ ಶಿಕ್ಷಣ ಕೊಡಿಸಬೇಕು ಎಂಬ ಪೋಷಕರ ಅಭಿಲಾಷೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಖಾಸಗಿ ಶಾಲೆಗಳು, ಹಣವನ್ನು ಲೂಟಿ ಹೊಡೆಯುವ ಜತೆಗೆ ಕನ್ನಡತನಕ್ಕೆ ವಿರುದ್ಧವಾದ ಶಿಕ್ಷಣ ನೀಡುತ್ತಿವೆ. ಕನ್ನಡವನ್ನು ದೇವಭಾಷೆಯನ್ನಾಗಿಸಿದ ಬಸವಣ್ಣ ಸೇರಿದಂತೆ ವಚನಕಾರರು ನಮ್ಮ ಮಕ್ಕಳಿಗೆ ಗೊತ್ತಿಲ್ಲ.

ದಾಸ ಶ್ರೇಷ್ಠರು, ಸಾಧು, ಸಂತರು, ಸಾಹಿತಿಗಳ ಬಗ್ಗೆ ತಿಳಿಸಿಕೊಟ್ಟಿಲ್ಲ. ಇದರಿಂದ ಕನ್ನಡದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಅನಿವಾರ್ಯವಾದರೆ ಮಾತ್ರ ಇಂಗ್ಲಿಷ್‌ ಬಳಸೋಣ. ಉಳಿದಂತೆ ಕನ್ನಡ ನಾಡಿನ ಎಲ್ಲೆಡೆ ಕನ್ನಡತನ ಇರುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಡಾ.ಪುಟ್ಟಶಂಕರಪ್ಪ ಮಾತನಾಡಿ, ಜನರು ಟಿ.ವಿ ಚಾನೆಲ್‌ಗ‌ಳಿಗೆ ಮಾರುಹೋಗಿ, ಪತ್ರಿಕೆ ಪುಸ್ತಕ ಕಡೆಗಣಿಸುತ್ತಿದ್ದಾರೆ. ಪ್ರತಿಯೊಬ್ಬ ಕನ್ನಡಿಗನೂ ದಿನ ಪತ್ರಿಕೆ, ವಾರಪತ್ರಿಕೆ ಹಾಗೂ ಮಾಸ ಪತ್ರಿಕೆಗಳನ್ನು ಖರೀದಿಸಿ ಓದಬೇಕು. ಮನೆಯ ಭಾಷೆ, ಮನೆಯ ಲೆಕ್ಕಪತ್ರಗಳು ಕನ್ನಡದಲ್ಲಿರಬೇಕು. ಮಕ್ಕಳಿಗೆ ಕನ್ನಡ ಪುಸ್ತಕವನ್ನು ಓದಲು ಪ್ರೋತ್ಸಾಹಿಸಬೇಕು ಎಂದರು.

Advertisement

ನಿವೃತ್ತ ಐಎಎಸ್‌ ಅಧಿಕಾರಿ ಡಾ.ಚಿರಂಜೀವಿ ಸಿಂಗ್‌, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಭಾಕರ್‌ ಪಟೇಲ್‌, ಸಿ.ವಿರಾಮನ್‌ನಗರ ವಿಧಾನಸಭಾ ಕ್ಷೇತ್ರದ ಕಸಾಪ ಅಧ್ಯಕ್ಷ ಎಚ್‌.ಮೊಹಮ್ಮದ್‌ ಮುನಾಫ್‌, ಡಾ.ಪುಟ್ಟಶಂಕರಪ್ಪ ಅವರ ಪತ್ನಿ ರಾಜೇಶ್ವರಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಮ್ಮೇಳನದ ಗೌರವಾಧ್ಯಕ್ಷ ಹಾಗೂ ಶಾಸಕ ಎಸ್‌.ರಘು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಅವರು ಪರಿಷತ್ತಿನ ಧ್ವಜಾರೋಹಣ ಹಾಗೂ ಸರ್‌.ಸಿ.ವಿ.ರಾಮನ್‌ನಗರ ಕಸಾಪ ಅಧ್ಯಕ್ಷ ಮೊಹಮ್ಮದ್‌ ಮುನಾಫ್‌ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನಾಧ್ಯಕ್ಷ ಡಾ.ಪುಟ್ಟಶಂಕರಪ್ಪ ದಂಪತಿಯನ್ನು ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿದರು.

ಕನ್ನಡ ಮರೀಚಿಕೆ: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಈಗಲೂ ಕನ್ನಡ ಎಂಬುದು ಮರೀಚಿಕೆಯಾಗಿದೆ. ಬೇರೆ ರಾಜ್ಯದವರು ಕರ್ನಾಟಕದಲ್ಲಿ ನೆಲೆಸಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಹೊರಗಿನಿಂದ ಬಂದವರು ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಕಲಿತು, ಎಲ್ಲರೊಂದಿಗೆ ಬೆರೆಯುವಂತಾಗಬೇಕು. ಹಾಗಾಗಿ ಈ ಪ್ರದೇಶಗಳಲ್ಲಿ “ಕನ್ನಡ ಕಲಿಕಾ ಕೇಂದ್ರ’ಗಳನ್ನು ತೆರೆದು, ಹೊರರಾಜ್ಯದಿಂದ ಬಂದವರಿಗೆ ಕನ್ನಡವನ್ನು ಕಲಿಸುವ ಕೆಲಸ ಆಗಬೇಕು ಎಂದು ಸಾಹಿತಿ ಸಿದ್ದಲಿಂಗಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next