ಬೆಂಗಳೂರು: ಶುಲ್ಕ ಕಡಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕ್ರಮ ಖಂಡಿಸಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳಾದ ಕ್ಯಾಮ್ಸ್, ಕುಸ್ಮಾ, ಮಿಕ್ಸಾ, ಎಂಎಎಸ್, ಎಬಿಇ, ಎಸ್ಇಸಿ ಮೊದಲಾದವುಗಳ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಶುಲ್ಕ ಕಡಿತ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡದೇ ಇದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಅಲ್ಲಿನ ಶಿಕ್ಷಕರನ್ನು ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರಿ ಶಾಲೆಗಳಿಗಿಂತ ಉತ್ಕೃಷ್ಟ ಶಿಕ್ಷಣವನ್ನು ಖಾಸಗಿ ಶಾಲೆಗಳು ನೀಡುತ್ತಿವೆ. ಕೊರೊನಾದಿಂದ ಖಾಸಗಿ ಶಾಲೆಗಳಿಗೆ ಶೇ.60 ರಿಂದ ಶೇ.70ರಷ್ಟು ಆರ್ಥಕ ಸಂಕಷ್ಟ ಎದುರಾಗಿದೆ. ಈ ನಡುವೆಯೂ ಪಾಲಕ, ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಆದರೂ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಸಮರ ಸಾರುತ್ತಿದೆ. ಶೇ.30ರಷ್ಟು ಶುಲ್ಕ ಕಡಿತ ಮಾತ್ರವಲ್ಲ, ವಿವಿಧ ವಿನಾಯತಿ ಹೆಸರಿನಲ್ಲಿ ಶೇ.50 ರಿಂದ 55ರಷ್ಟು ಶುಲ್ಕ ವಿನಾಯತಿ ಮಾಡಿದ್ದಾರೆ. ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಶುಲ್ಕ ವಿನಾಯ್ತಿಯನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಸರಕಾರದ ನಿರ್ಧಾರ ಖಂಡಿಸಿ ಇಂದು ರಾಜ್ಯಾದ್ಯಂತ ಖಾಸಗಿ ಶಾಲೆ ಪ್ರತಿಭಟನೆ
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಮೇಶ್ ಗೌಡ ಹಾಗೂ ಮಾಜಿ ಸಂಸದ ಶಿವರಾಮೇಗೌಡ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಇದ್ದರು.
ಪ್ರತಿಭಟನೆಗೂ ಮೊದಲು ನಗರದ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದ ಶೇಷಾದ್ರಿ ರಸ್ತೆ, ಗಾಂಧಿನಗರ, ಕೆ.ಆರ್.ವೃತ್ತ, ಮೆಜೆಸ್ಟಿಕ್ ಸುತ್ತಮುತ್ತಲು ಟ್ರಾಫಿಕ್ ಜಾಮ್ ಆಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.