Advertisement

ನಾಳೆ ಖಾಸಗಿ ಶಾಲಾ-ಕಾಲೇಜು ಬಂದ್‌

02:47 PM Feb 14, 2017 | Team Udayavani |

ಧಾರವಾಡ: ಕಾಲ್ಪನಿಕ ವೇತನ ಬಡ್ತಿ, ಮಾನ್ಯತೆ ನವೀಕರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಫೆ.15ರಂದು ಖಾಸಗಿ ಶಾಲಾ-ಕಾಲೇಜುಗಳಿಗೆ ಬಂದ್‌ ಕರೆ ನೀಡಲಾಗಿದೆ ಎಂದು ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಅಧ್ಯಕ್ಷ ಎಚ್‌.ಬಿ. ಡಂಬಳ ಹೇಳಿದರು. 

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳ ಹಾಗೂ ನೌಕರರ ಸಂಘಟನೆಗಳು ಹೋರಾಟ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಯ ನಿರ್ಣಯಂತೆ ಇದೀಗ ಫೆ.15ರಂದು ಶಾಲಾ-ಕಾಲೇಜುಗಳಿಗೆ ಬಂದ್‌ ಕರೆ ನೀಡಲಾಗಿದ್ದು, ಅಂದು ಎಲ್ಲರೂ ಸಾಮೂಹಿಕ ರಜೆ ಹಾಕಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಜ.27ರಂದು ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರೂ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೇ ಬರದೆ ಇರುವುದರಿಂದ ಅನಿವಾರ್ಯವಾಗಿ ಫೆ.15 ರಂದು ರಾಜ್ಯದ ಎಲ್ಲ ಶಾಸಗಿ ಶಾಲಾ-ಕಾಲೇಜುಗಳನ್ನು ಬಂದ್‌ ಮಾಡಲು ಕರೆ ನೀಡಿದೆ. 

ಧಾರವಾಡ ಕಲಾಭವನದಿಂದ ಬೆಳಿಗ್ಗೆ 11:00 ಗಂಟೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನಾ ರ್ಯಾಲಿಯೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. 

ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲಾ ನೌಕರರ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಪರಿಶೀಲಿಸಿ, ಶಾಶ್ವತ ಪರಿಹಾರ ನೀಡುವ  ನಿರೀಕ್ಷೆ ಹುಸಿಯಾಗಿದೆ. ಈ ಸಮಸ್ಯೆಗಳನ್ನು ಒಕ್ಕೂಟದ ಪದಾಧಿಧಿಕಾರಿಗಳು ಹಾಗೂ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ಸ್ಪಂದನೆ ನೀಡದೇ ಹೋಗಿದ್ದರಿಂದ ಈಗ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಬೀದಿಗಿಳಿಯುವಂತೆ ಮಾಡಿದೆ ಎಂದು ದೂರಿದರು. 

Advertisement

ಬೇಡಿಕೆಗಳು: ಖಾಲಿ ಹುದ್ದೆಗಳನ್ನು ತುಂಬಲು ಅನುಮತಿ ನೀಡುವುದು, ಶಿಕ್ಷಕ ವಿದ್ಯಾರ್ಥಿಗಳ ಅನುಪಾತವನ್ನು ಸಿಬಿಎಸ್‌ಸಿ, ಐಸಿಎಸ್‌ಇ ಮಾದರಿಯಂತೆ ನಿಗದಿಗೊಳಿಸುವುದು, ಸರ್ಕಾರ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯ ವಿದ್ಯಾರ್ಥಿಗಳ ನಡುವಿನ ಮಲತಾಯಿ ಧೋರಣೆ ಸರಿಪಡಿಸುವುದು, ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಯೋಜನೆ ಮುಂದುವರಿಸುವುದು, ಸರ್ಕಾರಿ ಹಾಗೂ ಖಾಸಗಿ ನಡುವಿನ ತಾರತಮ್ಯ ನಿವಾರಣೆ,

ಮಾನ್ಯತೆ ನವೀಕರಣವನ್ನು ಸರಳಿಕರಣಗೊಳಿಸುವುದು, ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಬಗೆಹರಿಸುವುದು, ವೇತನ ತಾರತಮ್ಯ ನಿವಾರಣೆ  ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಬಂದ್‌ ಕರೆ ನೀಡಲಾಗಿದೆ ಎಂದು ತಿಳಿಸಿದರು. ಕೆ.ಬಿ. ಕುಲಕರ್ಣಿ, ರಾಘವೇಂದ್ರ ಸೊಂಡೂರ, ಎಂ.ಎಸ್‌. ಪಾಟೀಲ, ಜೆ.ಆರ್‌. ಭಟ್‌ ಪತ್ರಿಕಾಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next