Advertisement

ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಅಗತ್ಯವಿಲ್ಲ: ಡಿಸಿ

07:00 AM Apr 03, 2018 | Team Udayavani |

ಮಂಗಳೂರು: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಖಾಸಗಿ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ
ಡಾ| ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ.

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮದುವೆ, ಹುಟ್ಟುಹಬ್ಬ ಆಚರಣೆ ಸಹಿತ ರಾಜಕೀಯ ಉದ್ದೇಶವಿಲ್ಲದ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕಾಗಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಾದರೆ ಧ್ವನಿವರ್ಧಕ ಸಹಿತ ನಿಯಮಾನು ಸಾರ ಪಡೆಯಬೇಕಾದ ಅನುಮತಿಗಳನ್ನು ಪಡೆಯಲೇಬೇಕು ಎಂದರು.

ಯಕ್ಷಗಾನ ಸಹಿತ ರಾಜಕೀಯೇತರ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜಕರು ಆ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ಉದ್ದೇಶಕ್ಕೆ ನಡೆಸುತ್ತಿಲ್ಲ ಎಂಬ ಘೋಷಣೆಯನ್ನು ದಾಖಲೆಯೊಂದಿಗೆ ಚುನಾವಣಾಧಿಕಾರಿಗಳಿಗೆ ಅಥವಾ ಸ್ಥಳೀಯ ನಗರ ಸ್ಥಳೀಯ ಸಂಸ್ಥೆ/ಗ್ರಾ.ಪಂ. ಅಥವಾ ಪೊಲೀಸ್‌ ಠಾಣೆಗೆ ಸಲ್ಲಿಸಬೇಕು, ಅನುಮತಿ ಪಡೆಯಲು ಅರ್ಜಿ ಸಲ್ಲಿಸಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಮಾತನಾಡಿ, ಕಮಿಷನರೆಟ್‌ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಎಸಿಪಿ ದರ್ಜೆಯ ಅಧಿಕಾರಿಗಳನ್ನು ಪೊಲೀಸ್‌ ನೋಡಲ್‌ ಅ ಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಚುನಾವಣಾ ನಿಯಮಗಳ ಕಟ್ಟುನಿಟ್ಟು ಜಾರಿಗೆ ಪ್ರತಿ ದಿನ ಪೊಲೀಸ್‌ ನೋಡಲ್‌ ಅಧಿಕಾರಿ ಮತ್ತು ಆಯಾ ಚುನಾವಣಾಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಆರ್‌. ರವಿಕಾಂತೇಗೌಡ ಮಾತನಾಡಿ, ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸರ್ಕಲ್‌ ಇನ್ಸ್‌ಪೆಕ್ಟರ್‌ಗಳಿಗೆ ಆಯಾ ಕ್ಷೇತ್ರದ ಭದ್ರತೆ ಉಸ್ತುವಾರಿ ನೀಡಲಾಗಿದೆ. ಫ್ಲೈಯಿಂಗ್‌ ಸ್ಕ್ವಾಡ್‌ಗಳಲ್ಲಿ ಎಎಸ್‌ಐ ಹಾಗೂ ಎಸ್‌ಎಸ್‌ಟಿ ತಂಡಗಳಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಇರಲಿದ್ದಾರೆ ಎಂದು ಹೇಳಿದರು.

Advertisement

ಎಡಿಸಿ ವೈಶಾಲಿ, ಡಿಸಿಪಿ ಹನುಮಂತರಾಯ, ಅಪರ ಎಸ್‌ಪಿ ಸಜೀತ್‌ ಉಪಸ್ಥಿತರಿದ್ದರು.

ಸಿಂಗಲ್‌ ವಿಂಡೋ
ಸಾರ್ವಜನಿಕ ಕಾರ್ಯಕ್ರಮಗಳಿಗೆ ತ್ವರಿತವಾಗಿ ಅನುಮತಿ ನೀಡಲು ಸಹಕಾರವಾಗುವಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕ ಗವಾಕ್ಷಿ (ಸಿಂಗಲ್‌ ವಿಂಡೋ) ತೆರೆಯಲಾಗುವುದು. ಸಾರ್ವಜನಿಕರು ಅನುಮತಿ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಬರಬೇಕಾದ ಅಗತ್ಯವಿಲ್ಲ ಎಂದು ಡಾ| ಶಶಿಕಾಂತ ಸೆಂಥಿಲ್‌ ತಿಳಿಸಿದರು.

ರಾಜಿ ಇಲ್ಲ
ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಗಮನ ಹರಿಸಬೇಕು. ಇದರಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ. ಫ್ಲೆಯಿಂಗ್‌ ಸ್ಕ್ವಾಡ್‌ ಮತ್ತು ಎಸ್‌ಎಸ್‌ಟಿ ತಂಡಗಳು ಪರಿಣಾಮಕಾರಿಯಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಡಿ.ಸಿ. ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next