ಹಾವೇರಿ: ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರವೇ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ನೂತನ ಯೋಜನೆ ರೂಪಿಸಲಿದೆ. ಶಿಗ್ಗಾವಿ ತಾಲೂಕಿನಲ್ಲಿ ಪೈಲೆಟ್ ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಶಿಗ್ಗಾವಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ 360 ಕೋಟಿ ವೆಚ್ಚದಲ್ಲಿ ಜಯದೇವ ಇನ್‌ಸ್ಟಿಟ್ಯೂಷನ್‌ಗೆ ಜನವರಿಯಲ್ಲಿ ಅಡಿಗಲ್ಲು ಹಾಕಲಾಗುವುದು. ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ ಪ್ರಮುಖ ಘಟಕ ಆರಂಭಿಸಲಾಗುವುದು. 60 ವರ್ಷ ಮೇಲ್ಪಟ್ಟವರ ಸಂಪೂರ್ಣ ಕಣ್ಣು ತಪಾಸಣೆ ನಡೆಸಿ ಕನ್ನಡಕ ನೀಡುವ ವಿನೂತನ ಯೋಜನೆ ಆರಂಭಿಸಲಾಗಿದೆ. ಹುಟ್ಟು ಕಿವುಡರಿಗೆ ಕಾಪಿಯರ್ ಪ್ಲಾಂಟ್ ಮಾಡಲು ಒಂದಕ್ಕೆ 5ರಿಂದ 8 ಲಕ್ಷ ರೂ. ವೆಚ್ಚವಾಗುತ್ತಿದ್ದು, ಪ್ರಸಕ್ತ ವರ್ಷವೇ ಆರಂಭಿಸಲಾಗಿದೆ. ಇದಕ್ಕೆ 500 ಕೋಟಿ ಮಂಜೂರಾತಿ ನೀಡಲಾಗಿದೆ. ಮುಖ್ಯಮಂತ್ರಿಗಳ ಆರೋಗ್ಯ ಸೇವೆಗೆ ಹಾವೇರಿ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಸರ್ಕಾರ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಿ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಕೆಲಸ ಈ ವರ್ಷ ಮಾಡಲಾಗುತ್ತಿದೆ. 60ಕ್ಕಿಂತ ಅ ಧಿಕ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ 12 ಹೊಸ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದೇ ಡಿಸೆಂಬರ್‌ನಲ್ಲಿ 437 “ನಮ್ಮ ಕ್ಲಿನಿಕ್’ ಆರಂಭಿಸಲಾಗುತ್ತಿದೆ. ಈ ಕ್ಲಿನಿಕ್‌ಗಳಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದು ಎಂದರು.
ಕಾರ್ಮಿಕ ಹಾಗೂ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸೇರಿದಂತೆ ಇತರರು ಇದ್ದರು.
ರಾಜ್ಯದಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಡಿಸೆಂಬರ್‌ನಲ್ಲಿ ಈ ಯಾತ್ರೆಯನ್ನು ಮತ್ತಷ್ಟು ತೀವ್ರಗೊಳಿಸಿ ಜನರ ವಿಶ್ವಾಸ ಪಡೆಯುತ್ತೇವೆ. ಚುನಾವಣಾ ವರ್ಷವಾಗಿರುವುದರಿಂದ ಪ್ರತಿ ಚುನಾವಣೆಯಂತೆ ಜನರ ಬಳಿ ಹೋಗುತ್ತಿದ್ದೇವೆ.
-ಬಸವರಾಜ ಬೊಮ್ಮಾಯಿ, ಸಿಎಂ