ಗಂಗಾವತಿ: ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರಗಳ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಲೇಔಟ್ ಗಳ ಮಾಲೀಕರು ನಗರದಲ್ಲಿ ನಡೆಯುತ್ತಿರುವ ಯುಜಿಡಿ ಪೈಪ್ ಲೈನ್ ಗೆ ಖಾಸಗಿ ಲೇಔಟ್ ನ ಚರಂಡಿ ನೀರು ಹೋಗುವ ಪೈಪ್ ಜೋಡಿಸುವ ಕಾರ್ಯಕ್ಕೆ ಸಾರ್ವಜನಿಕರ ಆಕ್ಷೇಪದ ಹಿನ್ನೆಲೆ ನಗರಸಭೆಯ ಅಧಿಕಾರಿಗಳು ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ.
ನಗರಸಭೆ ವ್ಯಾಪ್ತಿಯ ಸಿದ್ದಿಕೇರಿ ಬೈಪಾಸ್ ನಲ್ಲಿ ಹಲವು ಲೇಔಟ್ ಗಳಿದ್ದು ಇದರಲ್ಲಿ ಕೆಲ ಲೇಔಟ್ ಮಾಲೀಕರು ಪೌರಾಡಳಿತ ಮತ್ತು ನಗರ ಯೋಜನಾ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ ಶೇಕಡಾ 100 ರಷ್ಟು ಲೇಔಟ್ ಗಳ ಅಭಿವೃದ್ಧಿ ಮಾಡದೆ ಖಾಸಗಿ ಲೇಔಟ್ ನ ಚರಂಡಿ ನೀರು ಹೋಗುವ ಪೈಪ್ ಗಳನ್ನು ಸರ್ಕಾರದ ಯುಜಿಡಿ ಪೈಪ್ ಲೈನ್ ಗೆ ಜೋಡಿಸುತ್ತಿದ್ದು ಇದನ್ನು ಸಾರ್ವಜನಿಕರು ವಿರೋಧಿಸಿದ್ದಾರೆ.
ಕೆಲ ಖಾಸಗಿ ಲೇಔಟ್ ಮಾಲೀಕರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕೋಟ್ಯಂತರ ರೂ. ಲಾಭ ಮಾಡಿಕೊಳ್ಳುತ್ತಿದ್ದು, ನಗರಸಭೆಯ ಶುಲ್ಕವನ್ನು ಭರಿಸದೆ ಶೇಕಡಾ 100ರಷ್ಟು ಲೇಔಟ್ ಗಳ ಅಭಿವೃದ್ಧಿ ಮಾಡದೆ ಅಕ್ರಮವಾಗಿ ಲೇಔಟ್ ನ ಚರಂಡಿ ನೀರಿನ ಪೈಪ್ ಲೈನುಗಳನ್ನು ನಗರಸಭೆಯ ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆ ನಡೆಸುತ್ತಿರುವ ಪೈಪ್ ಲೈನ್ ಗೆ ಜೋಡಣೆ ಮಾಡುತ್ತಾರೆ. ಇದರಿಂದ ಈಗಿರುವ ಯೋಜನೆಯ ಪೈಪ್ ಗಳಿಗೆ ಹೆಚ್ಚಿನ ಒತ್ತಡ ಬಿದ್ದು ಇಡೀ ಯುಜಿಡಿಯ ಯೋಜನೆ ಹಾಳಾಗುವ ಸಂಭವವಿದೆ.
ನಿಯಮದಂತೆ ಖಾಸಗಿ ಲೇಔಟ್ ಮಾಲೀಕರು ಶೇಕಡಾ 100 ರಷ್ಟು ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಮಾಡಿ ನಗರಸಭೆ ಶುಲ್ಕವನ್ನು ಭರಿಸಿ ಖಾಸಗಿ ಲೇಔಟ್ ನ ಪೈಪ್ ಗಳನ್ನು ಯುಜಿಡಿ ಪೈಪ್ ಗೆ ಜೋಡಣೆ ಮಾಡಬೇಕು. ಆದರೆ ಕೆಲವು ಲೇಔಟ್ ಗಳ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ನಗರಸಭೆಗೆ ಸರಿಯಾಗಿ ಶುಲ್ಕವನ್ನು ಬರೆಸದೆ ತಮ್ಮ ಲೇಔಟ್ ನ ಚರಂಡಿ ನೀರು ಇತರೆ ನೀರಿನ ಪೈಪ್ ಗಳನ್ನು ಯುಜಿಡಿಗೆ ಜೋಡಣೆ ಮಾಡುತ್ತಿದ್ದಾರೆ. ಪರವಾನಗಿ ಇಲ್ಲದೆ ರಸ್ತೆ ಅಗೆದು ಪೈಪ್ ಗಳನ್ನು ಹಾಕುವ ಕಾರ್ಯ ಮಾಡುತ್ತಿದ್ದಾರೆ.
ಸಿದ್ದಿಕೇರಿ ಬೈಪಾಸ್ ರಸ್ತೆಯಲ್ಲಿ ರವಿವಾರ ರಸ್ತೆ ಖಾಸಗಿ ಲೇಔಟ್ ನ ನೀರಿನ ಪೈಪ್ ಗಳನ್ನು ಯುಜಿಡಿಗೆ ಜೋಡಿಸುವ ಕಾರ್ಯ ನಡೆಸಲಾಗುತ್ತಿದ್ದು ಇದನ್ನು ಕಂಡು ಸಾರ್ವಜನಿಕರು ನಗರಸಭೆಯ ಪೌರಾಯುಕ್ತರಿಗೆ ದೂರು ನೀಡಿದ್ದರಿಂದ ನಗರಸಭೆಯ ನೈರ್ಮಲ್ಯ ಮತ್ತು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ.
ಎಚ್ಚರಿಕೆ: ನಗರದಲ್ಲಿರುವ ಖಾಸಗಿ ಲೇಔಟ್ ನ ಮಾಲೀಕರು ಕೂಡಲೇ ಸರ್ಕಾರದ ನಿಯಮದಂತೆ ಶೇಕಡ ನೂರರಷ್ಟು ಅಭಿವೃದ್ಧಿ ಮಾಡಿ ನಂತರ ನಗರಸಭೆಯ ಶುಲ್ಕವನ್ನು ಭರಿಸಿ ನಗರಸಭೆಯ ಪರವಾನಗಿಯೊಂದಿಗೆ ಯುಜಿಡಿ ಸಂಪರ್ಕ ಜೋಡಣೆ ಮಾಡಬೇಕು. ಅದನ್ನು ಬಿಟ್ಟು ಏಕಾಏಕಿ ನಿಯಮ ಉಲ್ಲಂಘಿಸಿ ಖಾಸಗಿ ಲೇಔಟ್ ನ ನೀರಿನ ಪೈಪ್ ಗಳನ್ನು ಚರಂಡಿಯ ಪೈಪ್ ಗಳನ್ನು ಯುಜಿಡಿಗೆ ಜೋಡಣೆ ಮಾಡಿದರೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸಿದ್ದಿಕೇರಿ ಬೈಪಾಸ್ ರಸ್ತೆಯಲ್ಲಿ ಖಾಸಗಿ ಲೇಔಟ್ ನ ಮಾಲಿಕರು ಯುಜಿಡಿ ಪೈಪ್ ಗೆ ತಮ್ಮ ಲೇಔಟ್ ನ ಪೈಪ್ ಜೋಡಣೆ ಕಾರ್ಯ ಮಾಡುತ್ತಿದ್ದರು. ಈ ಕುರಿತು ಪೌರಾಯುಕ್ತರು ಸೂಚನೆ ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿ ಕಾಮಗಾರಿ ನಿಲ್ಲಿಸಲಾಗಿದೆ ಎಂದು ನಗರಸಭೆಯ ಎಂಜಿನಿಯರ್ ಗುರುರಾಜ್ ದಾಸನಾಳ ಉದಯವಾಣಿ ಗೆ ತಿಳಿಸಿದ್ದಾರೆ.