Advertisement
ಕೇಂದ್ರ ಸರಕಾರ ಸೌಲಭ್ಯ ಪಡೆಯಲು ಆಧಾರ್ ಅನ್ನು ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿರುವ ಕೆಲ ಎನ್‌ಜಿಓಗಳು ಇದರಿಂದ ಜನರ ಖಾಸಗಿತನ ನಾಶವಾಗಲಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಈ ಹಿಂದಿನ 1954 ಮತ್ತು 1963ರ ಖಾಸಗಿ ಹಕ್ಕು ಕುರಿತ ಸುಪ್ರೀಂಕೋರ್ಟ್‌ನ ಸಂವಿಧಾನಪೀಠಗಳು ನೀಡಿರುವ ತೀರ್ಪಿನ ಮರುಪರಿಶೀಲನೆಗೂ ಅರ್ಜಿ ಸಲ್ಲಿಸಲಾಗಿದೆ. ಇದೀಗ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಆರಂಭವಾಗಿದ್ದು, ಈ ಸಂದರ್ಭದಲ್ಲೇ ಕೆಲವೊಂದು ಅಭಿಪ್ರಾಯಗಳು ಬಂದಿವೆ.
ವಿಚಾರಣೆಯ ಬಹುಮುಖ್ಯ ಅಂಶವೇ ಖಾಸಗಿ ಹಕ್ಕು. ಜನರಿಗೆ ಖಾಸಗಿ ಹಕ್ಕು ಎಂಬುದು ಸಂವಿಧಾನ ಕಲ್ಪಿಸಿರುವ ಅವಕಾಶವೇ ಎಂಬುದಾಗಿದೆ. ಗೋಪಾಲ್ ಸುಬ್ರಮಣಿಯನ್ ಅವರು ಸಂವಿಧಾನದಲ್ಲೇ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಉಲ್ಲೇಖೀಸಲಾಗಿದೆ. ಇದರಲ್ಲೇ ಖಾಸಗಿತನವೂ ಸೇರಿದ್ದು ಇದು ಸ್ವಾಭಾವಿಕವಾಗಿ ಬಂದದ್ದು ಎಂದಿದ್ದಾರೆ. ಅಲ್ಲದೆ ಖಾಸಗಿ ಎಂಬುದು ವ್ಯಕ್ತಿಯ ಜತೆಜತೆಗೇ ಇರುವಂಥದ್ದು ಮತ್ತು ಅನುವಂಶಿಕವಾಗಿ ಬಂದದ್ದು ಎಂದು ಹೇಳಿದರು. ಈ ಸಂದರ್ಭದಲ್ಲೇ ಅವರು 1954ರ ಎಂಟು ನ್ಯಾಯಮೂರ್ತಿಗಳ ಪೀಠ ಮತ್ತು 1963ರ ಆರು ನ್ಯಾಯ ಮೂರ್ತಿಗಳನ್ನೊಳಗೊಂಡ ಪೀಠ ಖಾಸಗಿ ಹಕ್ಕು, ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿರುವುದು ಸರಿಯಲ್ಲ ಎಂದು ವಾದಿಸಿದರು.
Related Articles
Advertisement
ಖಾಸಗಿ ಹಕ್ಕಿನ ಬಗ್ಗೆ ತನ್ನದೇ ಮಾತುಗಳಲ್ಲಿ ವಿವರಿಸಿದ ಪೀಠ, ಮಗುವೊಂದಕ್ಕೆ ಜನ್ಮ ಕೊಡುವುದು ಪತಿ-ಪತ್ನಿಯರ ಖಾಸಗಿ ಹಕ್ಕು ಎಂದು ಹೇಳಿತು. ಆದರೆ, ಸರಕಾರ ರೂಪಿಸಿದ ಕಾನೂನಿನಂತೆ ಆ ಮಗುವನ್ನು ಶಾಲೆಗೆ ಕಳುಹಿಸುವುದಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಸರಕಾರ ಆದೇಶಿಸುವುದರಿಂದ ನಮ್ಮ ಖಾಸಗಿ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಹೇಳಿತು.
ಇದಷ್ಟೇ ಅಲ್ಲ, ಸಾಲ ಪಡೆವಾಗ ಬ್ಯಾಂಕುಗಳು ವೈಯಕ್ತಿಕ ಮಾಹಿತಿ ಕೇಳಿದಾಗ, ಖಾಸಗಿ ಹಕ್ಕಿನ ಅಡಿಯಲ್ಲಿ ಕೊಡುವುದಿಲ್ಲ ಎಂದು ಹೇಳಲು ಬರುವುದಿಲ್ಲ ಎಂದಿತು. ಆದರೆ ಬೆಡ್‌ರೂಂ ಮತ್ತು ಲೈಂಗಿಕ ಆಸಕ್ತಿ ಖಾಸಗಿತನಕ್ಕೆ ಸೇರುತ್ತವೆ ಎಂದು ಹೇಳಿತು.
ಆದರೆ ಇಂದು ನಾವು ದತ್ತಾಂಶಗಳ ಯುಗದಲ್ಲಿ ವಾಸಿಸುತ್ತಿರುವುದರಿಂದ ನಮ್ಮ ಮಾಹಿತಿಯನ್ನು ಕಾಪಿಡುವುದು ಅಷ್ಟೇ ಪ್ರಮುಖವಾಗುತ್ತದೆ. ಇದನ್ನು ಬಯಲು ಮಾಡಿದರೆ, ಅಪರಾಧ ಕೃತ್ಯ, ತೆರಿಗೆ ತಪ್ಪಿಸುವಿಕೆ ಅಥವಾ ಇನ್ನಾವುದೇ ಕಾನೂನು ಬಾಹಿರ ಕೆಲಸಗಳಿಗೆ ಬಳಕೆಯಾಗಬಹುದು. ಹೀಗಾಗಿ, ದತ್ತಾಂಶಗಳ ಸುರಕ್ಷತೆಗೆ ಕಾನೂನು ಮಾಡಬಹುದು ಎಂದು ಹೇಳಿತು.
ಸರಕಾರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು, ಖಾಸಗಿತನವನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ಸಾಧ್ಯವಿಲ್ಲ. ಅದು ನಮ್ಮ ಜೀವನದ ಹಕ್ಕು ಮತ್ತು ಸ್ವಾತಂತ್ರ್ಯದ ಜತೆಗೆ ಸೇರಿಕೊಂಡಿರುತ್ತದೆ ಎಂದರು. ಗುರುವಾರ ಕೂಡ ವಿಚಾರಣೆ ಮುಂದುವರಿಯಲಿದ್ದು, ವೇಣುಗೋಪಾಲ್ ಅವರೇ ವಾದ ಮುಂದುವರಿಸಲಿದ್ದಾರೆ.