ಚಿಕ್ಕನಾಯಕನಹಳ್ಳಿ: ಪಟ್ಟಣದ ಸಮೀಪದ ಗೋಡೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತೆ ಎಲ್ಲಾ ಮೂಲಸೌಲಭ್ಯ ಹೊಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ನವೀನ್ ಆಸ್ಪತ್ರೆ ಬಗ್ಗೆ ವಿಶೇಷ ಕಾಳಜಿಯೊಂದಿಗೆ ತಾಲೂಕಿಗೆ ಮಾದರಿ ಆಸ್ಪತ್ರೆಯಾಗುವಂತೆ ಮೂಲ ಸೌಕರ್ಯ ಗಳನ್ನು ಬಡ ರೋಗಿಗಳಿಗೆ ನೀಡಿದ್ದಾರೆ.
ಪ್ರತ್ಯೇಕ ಒಪಿಡಿ ವ್ಯವಸ್ಥೆ ರೋಗಿಗಳ ಬಗ್ಗೆ ವಿಶೇಷ ಕಾಳಜಿ, ಸುಲಭವಾಗಿ ರೋಗಿಗಳಿಗೆ ವೈದ್ಯರ ಲಭ್ಯತೆ ಸೇರಿದಂತೆ ಹತ್ತಾರು ವಿಶೇಷತೆಯನ್ನು ಈ ಆಸ್ಪತ್ರೆ ಹೊಂದಿದೆ. ಆಸ್ಪತ್ರೆಯ ಆವರಣದಲ್ಲಿ ಬಣ್ಣ ಬಣ್ಣದ ಹೂ ಗಿಡಗಳು, ಅಲಂಕಾರಿಕ ಗಿಡಗಳು, ಮರಗಳು, ರೋಗಿಗಳಿಗೆ ತಿಳಿವಳಿಕೆ ನೀಡುವ ಬರಹಗಳು ಆಸ್ಪತ್ರೆಯ ಆವರಣದ ಪಾರ್ಕ್ ರೀತಿ ಭಾಸವಾಗುತ್ತದೆ.
ಸುಸಜ್ಜಿತವಾದ ಆಸ್ಪತ್ರೆ: ಆಸ್ಪತ್ರೆ ಕಟ್ಟಡ ಚಿಕ್ಕದ್ದಾದರೂ ಇರುವ ಜಾಗವನ್ನೇ ಸುಸಜ್ಜಿತವಾಗಿ ಬಳಕೆ ಮಾಡಿಕೊಂಡಿರುವ ಡಾ.ನವೀನ್ ಆಸ್ಪತ್ರೆಯ ಒಳಭಾಗದಲ್ಲಿ ಮೂರು ಹಾಸಿಗೆ ಕೊಠಡಿ, ಪ್ರತ್ಯೇಕ ಒಪಿಡಿ ವ್ಯವಸ್ಥೆ, ಲ್ಯಾಬ್, ಬಣ್ಣ ಬಣ್ಣದ ಅಲಂಕಾರಿಕ ಗಿಡಗಳು, ಫಿಶ್ ಅಕ್ವೇರಿಯಂ, ಸೇರಿದಂತೆ ಆಸ್ಪತ್ರೆಯನ್ನು ವಿಶೇಷವಾಗಿ ಸಿದಟಛಿಪಡಿಸಿದ್ದಾರೆ.
ಮುಗಿ ಬೀಳುವ ರೋಗಿಗಳು: ಗೋಡೆಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೂರಾರು ರೋಗಿಗಳು ಜೆ.ಸಿ.ಪುರ, ಶೆಟ್ಟಿಕೆರೆ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ಊರುಗಳಿಂದ ಆಗಮಿಸುವುದು ವಿಶೇಷವಾಗಿದೆ. ಖಾಸಗಿ ಆಸ್ಪತ್ರೆಗಳ ನಡುವೆ ಉತ್ತಮ ಸೇವೆ ನೀಡುವ ಜೊತೆಗೆ ಆಸ್ಪತ್ರೆಯ ವೈಭವವನ್ನು ಹೆಚ್ಚಿಸಿಕೊಂಡು ಒಂದು ಸರ್ಕಾರಿ ಆಸ್ಪತ್ರೆ ಹೆಸರು ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಸರ್ಕಾರಿ ಆಸ್ಪತ್ರೆಗಳು ಉತ್ತಮ ಸೇವೆ ನೀಡುತ್ತಾವೆ ಎನ್ನುವುದಕ್ಕೆ ಗೋಡೆಕೆರೆ ಆಸ್ಪತ್ರೆ ಉದಾಹರಣೆಯಾಗಿದೆ.
* ಚೇತನ್