Advertisement

ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್‌

11:06 PM Sep 29, 2019 | Lakshmi GovindaRaju |

ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ರಾಜಮನೆತನದವರಿಂದ ನವರಾತ್ರಿ ಉತ್ಸವದ ಅಂಗವಾಗಿ ಖಾಸಗಿ ದರ್ಬಾರ್‌ ನಡೆಯಿತು. ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಐದನೇ ಬಾರಿಗೆ ರಾಜ ಪೋಷಾಕಿನಲ್ಲಿ ಖಾಸಗಿ ದರ್ಬಾರ್‌ ನಡೆಸಿದರು.

Advertisement

ಮುಂಜಾನೆ 5.10ರ ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಸಿಂಹದ ಮುಖಗಳನ್ನು ಜೋಡಿಸಲಾಯಿತು. ಬಳಿಕ, ಯದುವೀರ್‌ಗೆ ಎಣ್ಣೆ ಸ್ನಾನ ಮಾಡಿಸಿ, ಚಾಮುಂಡಿ ತೊಟ್ಟಿಯಲ್ಲಿ ಕೂರಿಸಿ, ಕಂಕಣ ಧಾರಣೆ ಮಾಡಲಾಯಿತು. ಮತ್ತೂಂದೆಡೆ, ತ್ರಿಶಿಕಾ ಕೂಡ ವಾಣಿವಿಲಾಸ ದೇವರಮನೆಯಲ್ಲಿ ಕಂಕಣ ಧಾರಣೆ ಮಾಡಿದರು. ಬಳಿಕ ಚಾಮುಂಡೇಶ್ವರಿ ಮತ್ತು ಗಣಪತಿಗೆ ಪೂಜೆ ಸಲ್ಲಿಸಿದರು.

ನಂತರ, ಚಾಮುಂಡಿ ತೊಟ್ಟಿಯಿಂದ ಅರಮನೆಗೆ ಆಗಮಿಸಿದ ಯದುವೀರ್‌ ಅವರನ್ನು ಬೆಳ್ಳಿಯ ಭದ್ರಾಸನದಲ್ಲಿ ಕೂರಿಸಿ ಪಾದಪೂಜೆ ನೆರವೇರಿಸ ಲಾಯಿತು. ಯದುವೀರ್‌ ಅವರು, ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಂಹಾಸನಾರೋಹಣ ಮಾಡಿ ದರ್ಬಾರ್‌ ನಡೆಸಿದರು. ಸುಮಾರು ಅರ್ಧ ಗಂಟೆ ಕಾಲ ದರ್ಬಾರ್‌ ನಡೆಯಿತು. ಸಂಜೆ ಮತ್ತೂಮ್ಮೆ ಖಾಸಗಿ ದರ್ಬಾರ್‌ ನಡೆಯಿತು.

ಸಿಎಂ ಭೇಟಿ: ಇದೇ ವೇಳೆ, ಅರಮನೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನು ಭೇಟಿ ಮಾಡಿದರು. ಜಂಬೂಸವಾರಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಕಳುಹಿಸಬೇಕು ಎಂದು ಮನವಿ ಮಾಡಿದರು. ಬಳಿಕ, ಮಹದೇಶ್ವರ ಬೆಟ್ಟದ ವತಿಯಿಂದ ಅರಮನೆ ಮುಂಭಾಗದಲ್ಲಿ ದಸರಾ ಮಾಹಿತಿ ಕೇಂದ್ರಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next