Advertisement

ಸೇವೆ ಬಿಟ್ಟು ಬೀದಿಗಿಳಿದ ಖಾಸಗಿ ವೈದ್ಯರು

12:50 PM Nov 04, 2017 | |

ವಿಜಯಪುರ: ರಾಜ್ಯ ಸರ್ಕಾರ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ವಿಜಯಪುರ ನಗರದಲ್ಲಿ ಖಾಸಗಿ ವೈದ್ಯರು ಶುಕ್ರವಾರ ಸಂಪೂರ್ಣ ಸೇವೆ ಸ್ಥಗತಿಗೊಳಿಸಿ ಬೀದಿಗಿಳಿದು ಹೋರಾಟ ನಡೆಸಿದರು. ರೋಗಿಗಳು ವೈದ್ಯಕೀಯ ಸೇವೆ ಲಭ್ಯವಾಗದೇ ಪರದಾಡುವಂತಾದರೂ ನಗರದಲ್ಲಿರುವ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳ ಸೇವೆ ಪರಿಣಾಮ ಕೊಂಚ ನಿಟ್ಟುಸಿರುವ ಬಿಡುವಂತಾಯಿತು.

Advertisement

ನಗರಲ್ಲಿರುವ ಖಾಸಗಿ ಆಸ್ಪತ್ರೆಗಳೆಲ್ಲ ತುರ್ತು ಆರೋಗ್ಯ ಸೇವೆ ಹೊರತಾಗಿ ಸಂಪೂರ್ಣ ಸೇವೆ ಸ್ಥಗಿತಗೊಳಿಸಿ ವೈದ್ಯಕೀಯ ಬಂದ್‌ ಆಚರಣೆಗೆ ಮುದಾದವು. ನಗರದ ಖಾಸಗಿ ಆಸ್ಪತ್ರೆಗಳಲ್ಲೆಲ್ಲ ಬಂದ್‌ ಹಿನ್ನೆಲೆಯಲ್ಲಿ ವೈದ್ಯಕೀಯ ಸೇವೆ ಸಂಪೂರ್ಣ ಸ್ಥಗಿತಗೊಳಿಸಿದ್ದಾಗಿ ಫಲಕ ಅಳವಡಿಸಿದ್ದೂ ಕಂಡು ಬಂತು. ವೈದ್ಯರ ಮುಷ್ಕರದ ಮಾಹಿತಿ ಇಲ್ಲದೇ ನಗರಕ್ಕೆ ಆಗಮಿಸಿ ರೋಗಿಗಳು ವೈದ್ಯರ ಸೇವೆ ದೊರೆಯದೇ ಪರದಾಡುವಂತಾಯಿತು. ಇದರ ಹೊರತಾಗಿಯೂ ನಗರದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಎರಡು ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ಅಭಾದಿ ತವಾಗಿದ್ದ ಕಾರಣ ರೋಗಿಗಳು ನಿರಾಳವಾಗಿದ್ದರು.

ಪ್ರತಿಭಟನೆ ಹಿನ್ನೆಲೆ ನಗರದ ಸಿದ್ದೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್‌ ಸಂಖ್ಯೆಯಲ್ಲಿದ್ದ ಖಾಸಗಿ ವೈದ್ಯರು ಮೆರವಣಿಗೆಯಲ್ಲಿ ತೆರಳಿ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸರ್ಕಾರ ಜಾರಿಗೆ ತರುತ್ತಿರುವ ಕೆಪಿಎಂಇ ಕಾಯ್ದೆ ತಿದ್ದುಪಡಿ ವೈದ್ಯ ವಿರೋಧಿಆಗಿದೆ. ಕೂಡಲೇ ಸರ್ಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ನ್ಯಾ| ವಿಕ್ರಂಜೀತಸೇನ್‌ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ನಿರತ ವೈದ್ಯರನ್ನು ಉದ್ಧೇಶಿಸಿ ಮಾತನಾಡಿದ ಮಕ್ಕಳ ತಜ್ಞವೈದ್ಯ ಡಾ| ಎಲ್‌.ಎಚ್‌. ಬಿದರಿ, ಸರ್ಕಾರ ತಿದ್ದುಪಡಿಗೆ ಮುಂದಾಗಿರುವ ವೈದ್ಯಕೀಯ ಕಾಯ್ದೆ ಅವೈಜ್ಞಾನಿಕವಾಗಿದ್ದು, ಸಾರ್ವಜನಿಕರಿಗೂ ಲಾಭವಿಲ್ಲ. ಕಾರ್ಪೋರೇಟ್‌ ವಲಯದ ಎಲ್ಲೋ ಕೆಲ ಆಸ್ಪತ್ರೆಗಳು ರೋಗಿಗಳಿಗೆ ಸೇವಾ ಪೂರ್ವದಲ್ಲಿ ಹಣ ಕಟ್ಟಿಸಿಕೊಳ್ಳುತ್ತಿರಬಹುದು. ಆದರೆ ನಗರ-ಪಟ್ಟಣ ಪ್ರದೇಶದ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳ ಸೇವೆಯನ್ನೇ ಉಸಿರಾಗಿಸಿಕೊಂಡಿವೆ.

ಸೇವೆ ಸಂದರ್ಭದಲ್ಲಿ ರೋಗಿಯ ಬಳಿ ಹಣ ಇಲ್ಲದಿದ್ದರೂ, ಚಿಕಿತ್ಸೆ ಬಳಿಕ ಹಣ ನೀಡಿದಿದ್ದರೂ ಹಲವು ಸಂದರ್ಭಗಳಲ್ಲಿ ಉಚಿತ ಸೇವೆ ನೀಡಿ ಮಾನವೀಯತೆ ಮೆರೆಯುತ್ತಾರೆ. ಇಂಥದ್ದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೇ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವೈದ್ಯರ ಪಾಲಿಗೆ ಮಾರಕ ಕಾಯ್ದೆ ರೂಪಿಸುತ್ತಿದೆ ಎಂದು ಕಿಡಿ ಕಾರಿದರು. ಖಾಸಗಿ ವೈದ್ಯರಿಗೆ ಮರಣಶಾಸನ ಎನಿಸಿರುವ ಕೆಪಿಎಂಇ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರ್ಕಾರ ಅದರಲ್ಲೂ ಆರೋಗ್ಯ ಸಚಿವರು ತುದಿಗಾಲಲ್ಲಿ ನಿಂತಿರುವ ಕ್ರಮ ಅನುಮಾನ ಮೂಡಿಸುತ್ತಿದೆ.

Advertisement

ಸರ್ಕಾರದ ನೂತನ ಕಾಯ್ದೆಯಿಂದ ರೋಗಿ ಹಾಗೂ ವೈದ್ಯರ ಮಧ್ಯೆ ಇರುವ ಸೌಹಾರ್ದಯುತ ಹಾಗೂ ಭಾವನಾತ್ಮಕ ಬಾಂಧವ್ಯಕ್ಕೆ ಕೊಳ್ಳಿ ಇಡಲಿದೆ. ಹೀಗಾಗಿ ಕೂಡಲೇ ಸರ್ಕಾರ ಈ ನಡೆಯಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಖಾಸಗಿ ವೈದ್ಯರು ವೈದ್ಯ ವೃತ್ತಿಯಿಂದ ಹಿಂದೆ ಸರಿಯುವುದಾಗಿ ಎಚ್ಚರಿಸಿದರು. 

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ| ಗೌರಾಂಬಾ ಸಜ್ಜನ, ಕಾರ್ಯದರ್ಶಿ ಡಾ| ರವಿಕುಮಾರ ಬಿರಾದಾರ, ಡಾ| ಜಸ್ಪಾಲ್‌ ಸಿಂಗ್‌ ತೆಹಲಿಯಾ, ಡಾ| ಪ್ರಿಯದರ್ಶಿನಿ ಪಾಟೀಲ, ಡಾ| ಅರವಿಂದ ಪಾಟೀಲ, ಡಾ| ಚೌಧರಿ, ಡಾ| ಸುರೇಶ ಕಾಗಲಕರರೆಡ್ಡಿ, ಡಾ| ಪ್ರಕಾಶ ಸಾಸನೂರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

„ಮುದ್ದೇಬಿಹಾಳ: ರಾಜ್ಯವ್ಯಾಪಿ ಖಾಸಗಿ ಆಸ್ಪತ್ರೆಗಳು ಶುಕ್ರವಾರ ನಡೆಸಿದ ಸೇವೆ ಬಂದ್‌ ಹೋರಾಟಕ್ಕೆ ಇಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಚಿಕಿತ್ಸೆ ಬಂದ್‌ ಮಾಡಲಾಗಿತ್ತು.  ಪಟ್ಟಣದಲ್ಲಿರುವ ಅಂದಾಜು 25ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಆಸ್ಪತ್ರೆಗಳು ಬೆಳಗ್ಗೆಯಿಂದಲೇ ಹೊರ ರೋಗಿಗಳ ಚಿಕಿತ್ಸೆ ಬಂದ್‌ ಮಾಡಿ ಬಾಗಿಲು ಹಾಕಿದ್ದವು. ಕೆಲ ದೊಡ್ಡಾಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಮೊದಲೇ ದಾಖಲಾಗಿದ್ದ ಒಳ ರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ಮುಂದುವರಿಸಲಾಯಿತು.

ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿದ್ದರಿಂದ ಇಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ತಾಲೂಕು ಸರ್ಕಾರಿ ಆಸ್ಪತ್ರಗೆ ನಿತ್ಯಕ್ಕಿಂತ ಶೇ. 50ರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಸಂಗಮೇಶ ಪಟ್ಟಣದ ತಿಳಿಸಿದರು.

ಮೆಡಿಕಲ್‌ ಶಾಪ್‌ಗ್ಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೆಲ ರೋಗಿಗಳು ಮೆಡಿಕಲ್‌ ಶಾಪ್‌ನಲ್ಲಿರುವವರಿಗೇ ತಮ್ಮ ರೋಗದ ಲಕ್ಷಣ ತಿಳಿಸಿ ಔಷ , ಮಾತ್ರೆ ಒಯ್ಯುತ್ತಿದ್ದದ್ದು ಅಲ್ಲಲ್ಲಿ ಕಂಡು ಬಂತು. ವೈದ್ಯರ ಮುಷ್ಕರದ ಮಾಹಿತಿ ಇಲ್ಲದ ಗ್ರಾಮೀಣ ಜನರು ಪಟ್ಟಣಕ್ಕೆ ಚಿಕಿತ್ಸೆಗೋಸ್ಕರ ಆಗಮಿಸಿ ಸಾಕಷ್ಟು ಪರದಾಡಿದರು. ನಂತರ ಅವರಿವರ ಸಲಹೆಯ ಮೇರೆಗೆ ಸರ್ಕಾರಿ ಆಸ್ಪತ್ರೆಗೆ ತೆರಳಿ ತಾತ್ಕಾಲಿಕ ಚಿಕಿತ್ಸೆ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next