ಮೈಸೂರು: ಆದಾಯ ತೆರಿಗೆ ಇಲಾಖೆ ದಾಳಿಯ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಗೌಪ್ಯತೆಯ ಪ್ರಮಾಣ ವಚನವನ್ನು ಉಲ್ಲಂ ಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದು, ರಾಜ್ಯಪಾಲರಿಗೂ ದೂರು ನೀಡುತ್ತೇವೆ, ಆತ್ಮ ಸಾಕ್ಷಿಗೆ ತಪ್ಪು ಅನಿಸಿದರೆ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಶಾಸಕ ಎಸ್.ಎ.ರಾಮದಾಸ್ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.28ರಂದು ರಾಜ್ಯದಲ್ಲಿ ಆದಾಯ ತೆರಿಗೆ ದಾಳಿ ನಡೆಯುತ್ತೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ದಿನ ಮುಂಚಿತವಾಗಿ ಹೇಳಿಕೆ ನೀಡುತ್ತಾರೆ. ಇವರಿಗೆ ದಾಳಿ ವಿಚಾರ ಗೊತ್ತಾಗಿದ್ದು ಹೇಗೆ?, ತಮಗೆ ಮಾಹಿತಿ ನೀಡಲು ಗುಪ್ತಚರ ಅಧಿಕಾರಿಗಳನ್ನು ಐಟಿ ಇಲಾಖೆಯಲ್ಲಿ ನಿಯೋಜಿಸಿದ್ದಾರಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಗೌಪ್ಯತೆಯ ಪ್ರಮಾಣವನ್ನೂ ಸ್ವೀಕರಿಸಿದ್ದೀರಿ, ಆದರೆ ಈಗ ತೆರಿಗೆ ಕಳ್ಳರಿಗೆ ಅನುಕೂಲ ಮಾಡಲು ಬಹಿರಂಗ ಪಡಿಸಿದಿರಾ ಎಂದು ಪ್ರಶ್ನಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾದರಿಯಲ್ಲಿ ದಾಳಿ ಮಾಡುವ ಐಟಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿ, ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದೀರಾ,
ದಾಳಿ ಮಾಡಿದರೆ ಹಿಂಸೆ ಕೊಡುತ್ತೇನೆ ಎನ್ನುವ ಕೆಟ್ಟ ಸಂದೇಶವನ್ನು ರವಾನಿಸಿದ್ದೀರಿ, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಯ ಈ ಕ್ರಮ ಸಂವಿಧಾನ ಬಾಹಿರ, ಕ್ರಿಮಿನಲ್ ಅಪರಾಧ, ಇದರಿಂದ ನಿಷ್ಪಕ್ಷಪಾತ ಚುನಾವಣೆ ನಡೆಸುವುದು ಕಷ್ಟ,
ಹೀಗಾಗಿ ಮುಖ್ಯಮಂತ್ರಿ ವಿರುದ್ಧ ಕ್ರಮವಹಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದೇವೆ. ಐಟಿ ದಾಳಿ ವಿಚಾರದಲ್ಲಿ ಯಾರು ಯಾರನ್ನು ರಕ್ಷಣೆ ಮಾಡಿದರು ಎಂಬ ಸುದ್ದಿಗಳ ಆಧಾರದ ಮೇಲೆ ರಾಜ್ಯಪಾಲರಿಗೂ ದೂರು ನೀಡುವುದಾಗಿ ತಿಳಿಸಿದರು.