Advertisement

ಹುಡುಗರ ಸಾಧನೆಗೆ ಹೆಮ್ಮೆಯಾಗುತ್ತಿದೆ: ದ್ರಾವಿಡ್‌

06:00 AM Feb 06, 2018 | Team Udayavani |

ಮುಂಬಯಿ: ದಾಖಲೆ 4ನೇ ಬಾರಿಗೆ ವಿಶ್ವಕಪ್‌ ಗೆದ್ದ ಭಾರತದ ಅಂಡರ್‌-19 ಕ್ರಿಕೆಟ್‌ ವೀರರು ಸೋಮವಾರ ಸಂಜೆ ತವರಿಗೆ ಆಗಮಸಿದರು. ಕೋಚ್‌ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಪಳಗಿ ಇತಿಹಾಸ ನಿರ್ಮಿಸಿದ ಪೃಥ್ವಿ ಶಾ ಬಳಗಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ನಾಯಕ ಶಾ ಮತ್ತು ಕೋಚ್‌ ದ್ರಾವಿಡ್‌ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಅನುಭವ ಹಾಗೂ ಯಶೋಗಾಥೆಯನ್ನು ಬಣ್ಣಿಸತೊಡಗಿದರು.

Advertisement

ಈ ಸಂದರ್ಭದಲ್ಲಿ ಮಾತಾಡಿದ ದ್ರಾವಿಡ್‌, ಹುಡುಗರ ಈ ಅಮೋಘ ಸಾಧನೆಯಿಂದ ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. “ನನಗೆ ವಿಶ್ವಕಪ್‌ ಗೆಲ್ಲಲಾಗಲಿಲ್ಲ ಎಂಬ ನೋವು ಖಂಡಿತ ಇಲ್ಲ. ನನ್ನ ಕ್ರಿಕೆಟ್‌ ಆಟದ ಬದುಕು ಈಗಾಗಲೇ ಮುಗಿದಿದೆ. ಹೀಗಾಗಿ ಅದನ್ನೆಲ್ಲ ನಾನು ಮರೆತು ಬಿಟ್ಟಿದ್ದೇನೆ. ಈಗ ಈ ಹುಡುಗರ ಸಾಧನೆಯನುನ ಕಂಡು ಹೆಮ್ಮೆಯಾಗುತ್ತಿದೆ. ಹುಡುಗರೆಲ್ಲ ಗುರಿ ಮುಟ್ಟುವ ಹಾದಿಯಲ್ಲಿ ಕಠನ ಸವಾಲುಗಳನ್ನು ಎದುರಿಸಿದರು. ಭಾರೀ ಪರಿಶ್ರಮ ಹಾಕಿದರು. ಚಾಂಪಿಯನ್ನರಾಗಿ ಹೊರಹೊಮ್ಮಿರುವ ಇವರನ್ನು ನೋಡುವುದೇ ಒಂದು ಖುಷಿ…’ ಎಂದರು.

“ಫೈನಲ್‌ ಸಂದರ್ಭದಲ್ಲೇ ಐಪಿಎಲ್‌ ಹರಾಜು ಕೂಡ ಇದ್ದುದರಿಂದ ನಾನು ಸ್ವಲ್ಪ ಚಿಂತೆಗೊಳಗಾಗಿದ್ದೆ. ಉಳಿದಂತೆ ಈ ಪಂದ್ಯಾವಳಿಯ ಯಾವುದೇ ಹಂತದಲ್ಲೂ ನಾನು ಚಿಂತೆ ಮಾಡಲಿಲ್ಲ’ ಎಂದರು.

“ಪ್ರತಿಯೊಂದು ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ನಾನು ಪಾಕಿಸ್ಥಾನದ ಎಡಗೈ ಪೇಸ್‌ ಬೌಲರ್‌ ಒಬ್ಬನನ್ನು ಭೇಟಿಯಾಗಿದ್ದೆ. ಆತ ಪಂದ್ಯಾವಳಿಯುದ್ದಕ್ಕೂ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದ. ಓರ್ವ ಕೋಚ್‌ ಆಗಿ ಎಲ್ಲ ಕಡೆ ಕ್ರಿಕೆಟ್‌ ಪ್ರತಿಭೆಗಳನ್ನು ಕಾಣುವುದು ನಿಜಕ್ಕೂ ಖುಷಿ ಕೊಡುವ ಸಂಗತಿ. ನಮ್ಮ ಹುಡುಗರ ಸಾಧನೆ ಬಗ್ಗೆ ಪಾಕ್‌ ತರಬೇತುದಾರರೂ ಪ್ರಶಂಸೆ ವ್ಯಕ್ತಪಡಿಸಿದರು. ನಿಮ್ಮ ಹುಡುಗರ ಆಟ ಎಲ್ಲರಿಗೂ ಮಾದರಿ ಎಂದು ಅವರು ಹೇಳಿದರು…’ ಎಂಬುದಾಗಿ ದ್ರಾವಿಡ್‌ ನೆನಪಿಸಿಕೊಂಡರು.

ಪಾಕ್‌ ಪಂದ್ಯದ ಕುರಿತು…
“ಪಾಕಿಸ್ಥಾನ ವಿರುದ್ಧದ ಸೆಮಿಫೈನಲ್‌ ವೇಳೆ ನಾವು ವಿಶೇಷ ಸಿದ್ಧತೆಯನ್ನೇನೂ ಮಾಡಿಕೊಳ್ಳಲಿಲ್ಲ. ಬಾಂಗ್ಲಾದೇಶ ಅಥವಾ ಪಪುವಾ ನ್ಯೂ ಗಿನಿ ಎದುರಿನ ಪಂದ್ಯಕ್ಕೂ ಮುನ್ನ ನಮ್ಮ ತಯಾರಿ ಹೇಗಿತ್ತೋ, ಪಾಕ್‌ ವಿರುದ್ಧವೂ ಹಾಗೆಯೇ ಇತ್ತು. ಇದೊಂದು ದೊಡ್ಡ ಪಂದ್ಯ ಎಂದು ಹುಡುಗರಿಗೆ ತಿಳಿದಿತ್ತು. ಆದರೆ ಭಾರತ-ಪಾಕಿಸ್ಥಾನ ಪಂದ್ಯದ ಒತ್ತಡ ಹೇಗಿರುತ್ತದೆ ಎಂಬುದನ್ನು ಇವರೆಲ್ಲ ತಿಳಿದುಕೊಂಡದ್ದಕ್ಕೆ ಹಾಗೂ ಇದನ್ನು ನಿಭಾಯಿಸಿದ ರೀತಿಗೆ ನಿಜಕ್ಕೂ ಖುಷಿಯಾಗುತ್ತದೆ. ಸೆಮಿಫೈನಲ್‌ ವೇಳೆ ಎಲ್ಲರೂ ಶಾಂತಚಿತ್ತರಾಗಿ ಆಡಿದ್ದಕ್ಕೆ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ…’ ಎಂದು ದ್ರಾವಿಡ್‌ ಹೇಳಿದರು.

Advertisement

ಈ ಸಂದರ್ಭದಲ್ಲಿ ಮಾತಾಡಿದ ನಾಯಕ ಪೃಥ್ವಿ ಶಾ, “ನನಗೆ ಈ ಕ್ಷಣವನ್ನು ಬಣ್ಣಿಸಲು ಪದಗಳು ಸಿಗುತ್ತಿಲ್ಲ. ನನ್ನ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಎಲ್ಲ ಆಟಗಾರರಿಗೂ ಥ್ಯಾಂಕ್ಸ್‌ ಹೇಳಬಯಸುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next