ಲಿಂಕೋಲಿನ್ ( ನ್ಯೂಜಿಲ್ಯಾಂಡ್): ಭಾರತದ ಯುವ ಆಟಗಾರ ಪೃಥ್ವಿ ಶಾ ಕಿವೀಸ್ ನೆಲದಲ್ಲಿ ಮಿಂಚಿದ್ದಾರೆ. ಉಭಯ ದೇಶಗಳ ‘ಎ’ ತಂಡಗಳ ಸರಣಿಯಲ್ಲಿ ಶುಭ್ಮನ್ ಗಿಲ್ ಬಳಗ ದ್ವಿತೀಯ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ನೆರವಿನಿಂದ 372 ರನ್ ಗಳಿಸಿತು. ಶಾ ಕೇವಲ 100 ಎಸೆತಗಳಿಂದ 150 ರನ್ ಬಾರಿಸಿದರು. ಉಳಿದಂತೆ ಮಯಾಂಕ್ ಅಗರ್ವಾಲ್ 32 ರನ್, ವಿಜಯ್ ಶಂಕರ್ 58 ರನ್ ಗಳಿಸಿದರು.
ಅಂತಿಮವಾಗಿ ಸತತವಾಗಿ ವಿಕೆಟ್ ಕಳೆದುಕೊಂಡ ಭಾರತ 49.2 ಓವರ್ 372 ರನ್ ಗೆ ಆಲ್ ಔಟ್ ಆಯಿತು.
ಗುರಿ ಬೆನ್ನತ್ತಿದ ಕಿವೀಸ್ ತಂಡ ಕೂಡ ಒಂದು ಹಂತದಲ್ಲಿ ಗೆಲುವಿನ ಕನಸು ಕಂಡಿತ್ತು. ಆರಂಭಿಕ ಆಟಗಾರ ಜ್ಯಾಕ್ ಬಾಯ್ಲ್ ಎಸೆತಕ್ಕೊಂದರಂತೆ 130 ರನ್ ಗಳಿಸಿದರು. ಉಳಿದಂತೆ ಫಿನ್ ಆಲೆನ್ 87 ರನ್ ಗಳಿಸಿದರು. ಅಂತಿಮವರೆಗೆ ಪ್ರಯತ್ನ ಮಾಡಿದರೂ ಕಿವೀಸ್ ಎ’ ತಂಡ ಆರು ವಿಕೆಟ್ ನಷ್ಟಕ್ಕೆ 360 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ಇಶಾನ್ ಪೊರೇಲ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.