ಮುಂಬೈ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಆಟಗಾರರಾದ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಮುಂದಿನ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಗೆ ತೆರಳವುದು ಬಹುತೇಕ ಖಚಿತವಾಗಿದೆ.
ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಶುಭ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಆವೇಶ್ ಖಾನ್ ಗಾಯಾಳುಗಳಾದ ಕಾರಣ ಶಾ ಮತ್ತು ಯಾದವ್ ರನ್ನು ಇಂಗ್ಲೆಂಡ್ ಗೆ ಕರೆಸಿಕೊಳ್ಳಲಾಗುತ್ತದೆ ಎನ್ನಲಾಗಿದೆ. ಇವರೊಂದಿಗೆ ಆಲ್ ರೌಂಡರ್ ಜಯಂತ್ ಯಾದವ್ ಹೆಸರು ಕೂಡಾ ಕೇಳಿಬಂದಿತ್ತು. ಆದರೆ ಬಯೋ ಬಬಲ್ ಕಾರಣದಿಂದ ಜಯಂತ್ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ: ಬೆಳ್ಳಿ ಗೆದ್ದ ಮಿರಾಬಾಯ್ ಚಾನು
ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಇಂಗ್ಲೆಂಡ್ ಗೆ ತೆರಳುವುದು ಖಚಿತವಾಗಿದೆ. ಅವರು ಕೊಲಂಬೋದಿಂದ ನೇರವಾಗಿ ಲಂಡನ್ ಗೆ ತೆರಳುತ್ತಾರೆ. ಒಂದು ಬಯೋ ಬಬಲ್ ನಿಂದ ಮತ್ತೊಂದು ಬಯೋ ಬಬಲ್ ಗೆ ಪ್ರವೇಶ ಪಡೆಯುತ್ತಾರೆ. ಲಂಕಾ ವಿರುದ್ಧದ ಟಿ20 ಸರಣಿಯ ನಡುವೆಯೇ ಹೋಗುತ್ತಾರೆಯೇ ಅಥವಾ ಸರಣಿ ಮುಗಿದ ಬಳಿಕ ಹೋಗುತ್ತಾರೋ ಎನ್ನುವ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಕೂಡಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮೊದಲ ಪಂದ್ಯಕ್ಕೂ ಮೊದಲು ಚೇತರಿಸಿಕೊಳ್ಳದಿದ್ದರೆ ಅವರ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಆಡುತ್ತಾರೆ ಎನ್ನಲಾಗಿದೆ. ಸರಣಿಯ ಮೊದಲ ಪಂದ್ಯ ಆ.4ರಂದು ಆರಂಭವಾಗಲಿದೆ.