ಹಾಸನ: “ಜೆಡಿಎಸ್‌ಗೆ ಓಟ್ ಹಾಕಿದ್ರೆ ಬಿಜೆಪಿಗೆ ಹಾಕಿದ ರೀತಿ. ದೇವೇಗೌಡರು-ಮೋದಿ ಅವರ ನಡುವೆ ಮಾತುಕತೆ ನಡೆದಿದೆ’ಎಂಬ ಶಾಸಕ ಪ್ರೀತಂಗೌಡ ಹೇಳಿಕೆ ಹತಾಶೆಯ ಪ್ರತೀಕ, ಬ್ಲಾಕ್ ಮೇಲ್ ತಂತ್ರ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ಧಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಬಿಜೆಪಿಯ ಕೆಟ್ಟ ಹುಳ (ಪ್ರೀತಂಗೌಡ ) ಹುಟ್ಟಲು ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮಾಡಿದ್ದ ಆರೋಪ ಕಾರಣ. ಈಗ ಮುಸಲ್ಮಾನರು ಬಿಜೆಪಿಗೆ ಓಟು ಕೊಡಲ್ಲವೆಂದು ಹತಾಶೆಯಿಂದ ಹಾಸನದ ಶಾಸಕ
ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ ಎಂದು ಪ್ರೀತಂಗೌಡಗೆ ತಿರುಗೇಟು ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸಖ್ಯ ಬಿಟ್ಟು ಬನ್ನಿ, ಬಿಜೆಪಿ ಬೆಂಬಲದೊಂದಿಗೆ 5 ವರ್ಷ ಮುಖ್ಯಮಂತ್ರಿಯಾಗಿರಿ ಎಂದು ಮೋದಿ ಅವರೇ ಕರೆದಿದ್ದರು. ಆಗಲೇ ಬಿಜೆಪಿ ಸಖ್ಯ ಮಾಡದ ನಾವು ಈಗ ಬಿಜೆಪಿ ಜತೆ ಮೈತ್ರಿಗೆ ಹೋಗುತ್ತೇವೆಯೇ ಎಂದು ಪ್ರಶ್ನಿಸಿದರು.