ತುಮಕೂರು: ಸ್ಮಾರ್ಟ್‌ಸಿಟಿ ಅಧಿಕಾರಿಗಳೆಂದು ಹೇಳಿಕೊಂಡು ಮನೆಗಳಿಗೆ ನುಗ್ಗಿ ವಂಚಿಸಿ ಚಿನ್ನಾಭರಣಗಳನ್ನು ದೋಚ್ಚುತಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿಸಿ 2.52 ಲಕ್ಷ ನಗದು 500 ಗ್ರಾಂ ಚಿನ್ನವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಡಾ. ದಿವ್ಯಾ ವಿ.ಗೋಪಿನಾಥ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮಕೂರು, ಬೆಂಗಳೂರು ನಗರಗಳಲ್ಲಿ ವಯಸ್ಸಾದವರು ಮತ್ತು ಒಂಟಿ ಮಹಿಳೆಯರು ಇರುತ್ತಿದ್ದ ಮನೆಗಳನ್ನು ಗುರುತಿಸಿ ತಾವು ಸ್ಮಾರ್ಟ್‌ಸಿಟಿ ಅಧಿಕಾರಿಗಳೆಂದು ಹೇಳಿಕೊಂಡು ವಂಚಿಸಿ ಮನೆಯೊಳಗೆ ನುಗ್ಗಿ ಹಣವನ್ನು ದೋಚುತ್ತಿದ್ದ ತಂಡದವರನ್ನು ಬಂಧಿಸಿ
500 ಗ್ರಾಂ ಬಂಗಾರ, 2.52 ಲಕ್ಷ ನಗದು ಹಾಗೂ ಹೀರೋ ಹೋಂಡಾ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತ್ಸಂದ್ರ, ಸಿಎಸ್‌ಐ ಲೇಔಟ್‌ನಲ್ಲಿ ಮತ್ತು ಜಯನಗರ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ವೃದ್ಧರಿರುವ ಮನೆಗಳಿಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳೆಂದು ಹೋಗಿ ಮನೆಗಳಲ್ಲಿ ಕಳವು ಮಾಡುದ್ದ ಆರೋಪಿಗಳಾದ ತಮಿಳುನಾಡಿನ ಪೆಳ್ಳಿಯಾರ್‌ನ ನಿವಾಸಿ ಗಣೇಶ್, ಶಿವಮೊಗ್ಗ ಜಿಲ್ಲೆ ದೊಡ್ಡೇರಿ ಗ್ರಾಮದ ಡಿ.ಎಂ.ರಾಮಚಂದ್ರ, ಪಂಜಾಬಿನ ಜಲಂಧರ್ ಸಿಟಿಯ ಫರೀದುಲ್ ಇಂತಿಯಾಝ್ ಇವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇವರ ಪೈಕಿ ಗಣೇಶ್ ಮತ್ತು ರಾಮಚಂದ್ರ ಮೊದಲಿಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳೆಂದು ಹೇಳಿಕೊಂಡು ನಿಮ್ಮ ಮನೆಯ ಯುಜಿಡಿ ಅಥವಾ ವಾಟರ್ ಕನೆಕ್ಷನ್ ನೋಡಬೇಕೆಂದು ಮಾಲೀಕರ ಗಮನವನ್ನು ಬೇರೆಕಡೆಗೆ ಸೆಳೆದು ಮನೆಯ ಮೇಲೆ ಕರೆದುಕೊಂಡು ಹೋದಾಗ ಒಬ್ಬ ಮನೆಯೊಳಗೆ ಹೋಗಿ ಆಭರಣಗಳನ್ನು ದೋಚುತ್ತಿದ್ದ ಕೃತ್ಯವಾದ ನಂತರ ಹೊರಗಡೆ ಇರುತ್ತಿದ್ದ ಫರೀದುಲ್ ಇಂತಿಯಾಝ್ ಮನೆಯ ಮೇಲೆ ಇರುತ್ತಿದ್ದ ಗಣೇಶ ಮತ್ತು ರಾಮಚಂದ್ರನಿಗೆ ಸನ್ನೆ ನೀಡುತ್ತಿದ್ದ ಆ ಸಮಯದಲ್ಲಿ ಕೃತ್ಯ ನಡೆಸುತ್ತಿದ್ದರು ಎಂದು ಹೇಳಿದರು.
ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ನಂಬರ್ ಪ್ಲೇಟ್ ಮೇಲೆ ನಂಬರ್‌ಗಳು ತಿರುಚಿದಂತೆ ಕಂಡಾಗ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಟಿಎನ್-23 ಎಂಬುದು ಕೆಎ-23 ಎಂಬುದಾಗಿ ಬದಲಾವಣೆ ಮಾಡಿದ್ದು ಈ ಬೈಕ್‌ನ್ನು ವೆಲ್ಲೂರು ನಗರದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಾಗ ತನಿಖೆಯನ್ನು ಮುಂದುವರೆಸಿದ ಮೇಲೆ ಅವರು ನಗರದಲ್ಲಿ ಮಾಡಿರುವ ಕೃತ್ಯಗಳು ಒಂದೊಂದಾಗಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಡಿವೈಎಸ್‌ಪಿ ನಾಗರಾಜು ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸಿಪಿಐಗಳಾದ ರಾಧಾಕೃಷ್ಣ, ರಾಮಕೃಷ್ಣ, ಪಿಎಸ್‌ಐ ಲಕ್ಷ್ಮಯ್ಯ, ಸಿಬ್ಬಂದಿ ನರಸಿಂಹರಾಜು, ಸೈಮನ್ ವಿಕ್ಟರ್, ಮುನಾವರ್ ಪಾಷಾ, ಮೋಹನ್ ಕುಮಾರ್, ಶಾಂತರಾಜು, ರಮೇಶ್, ಪ್ರಸನ್ನ ಅವರನ್ನು ನಿಯೋಜಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಅವರನ್ನು ಅಭಿನಂದಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್‌ಪಿ ನಾಗರಾಜು ಇತರರು ಇದ್ದರು.