Advertisement

ಕೈದಿಗಳೇ, ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಿ

10:06 PM Nov 05, 2019 | Lakshmi GovindaRaju |

ಮೈಸೂರು: ಅಪರಾಧವೆಸಗಿ ಶಿಕ್ಷೆಗೆ ಗುರಿಯಾದ ಕೈದಿಗಳು ತಮ್ಮ ಕೃತ್ಯದ ಬಗ್ಗೆ ಪಶ್ಚಾತಾಪ ಪಟ್ಟಿಕೊಂಡು, ಸನ್ನಢತೆಯಲ್ಲಿ ಸಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ. ಒಂಟಿಗೋಡಿ ಸಲಹೆ ನೀಡಿದರು. ಮೈಸೂರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಮಹಾತ್ಮ ಗಾಂಧೀಜಿಯವರ 150 ನೇ ಜಯಂತಿಯ ಅಂಗವಾಗಿ ನಡೆದ ಅವಧಿಗೂ ಮುನ್ನ ಸನ್ನಢತೆಯ ಕೈದಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಕೆಲವೊಂದು ಕೆಟ್ಟಗಳಿಗೆಯಲ್ಲಿ ಅಪರಾಧಿಗಳು ಕೃತ್ಯ ಎಸಗಿರುತ್ತಾರೆ. ಆದರೆ ಕೃತ್ಯದ ಮುಂದಿನ ಗಂಭೀರತೆ ಅವರಿಗೆ ತಿಳಿದಿರುವುದಿಲ್ಲ. ಕೃತ್ಯ ಎಸಗಿದ ನಂತರ ತಮ್ಮ ತಪ್ಪಿನ ಅರಿವಾಗುತ್ತದೆ. ಬಳಿಕ ಅವರು ಬಂಧಿಖಾನೆಯಲ್ಲಿ ಸನ್ನಢತೆಯಿಂದ ಬದುಕುತ್ತಾರೆ. ಅಂತಹವರನ್ನು ಸರ್ಕಾರ ಗುರುತಿಸಿ ಬಿಡುಗಡೆ ಮಾಡುತ್ತದೆ ಎಂದರು.

ಅಪರಾಧ ರಹಿತ ಸಮಾಜ: ಶಾಸಕ ತನ್ವೀರ್‌ ಸೇಠ್ ಮಾತನಾಡಿ, ತಪ್ಪು ಮಾಡುವುದು ಸಹಜ. ಆದರೆ, ಅದನ್ನು ಅರಿತು ತಿದ್ದಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕಾರಾಗೃಹದಲ್ಲಿ ಒಬ್ಬನೂ ಕೈದಿ ಇಲ್ಲದ ಹಾಗೂ ಸಮಾಜದಲ್ಲಿ ಅಪರಾಧ ಪ್ರಕರಣಗಳು ಸಂಪೂರ್ಣವಾಗಿ ಕಡಿಮೆಯಾದಾಗ ಮಾತ್ರ ನಮಗೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ.

ಈ ನಿಟ್ಟಿನಲ್ಲಿ ಮನುಷ್ಯನಾದವನು ಗಾಂಧೀಜಿಯವರ ಅಹಿಂಸೆ, ಶಾಂತಿ, ಸಹೋದರತೆ ತತ್ವ ಬೆಳೆಸಿಕೊಂಡಾಗ ಮಾತ್ರ ಅಪರಾಧ ರಹಿತ ಸಮಾಜ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕೈದಿಗಳ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಿದ್ದು, ಮೈಸೂರು ಕೇಂದ್ರ ಕಾರಾಗೃಹದಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಕಾರಾಗೃಹದ ಅಭಿವೃದ್ದಿಗೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ವಿಶೇಷ ಮಾಫಿ: ಈ ಸಂದರ್ಭ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಬಂಧಿಯಾಗಿದ್ದ ವಿದ್ಯಾರಣ್ಯಪುರಂ ನಿವಾಸಿ ಮಲ್ಲಿಕಾರ್ಜುನ, ಬೆಂಗಳೂರು ಜಿಲ್ಲೆಯ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದ ರಮೇಶ ಹಾಗೂ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸಂಬಂಧ ಬಂಧಿಯಾಗಿದ್ದ ಮೈಸೂರಿನ ವಿ.ವಿ. ಮೊಹಲ್ಲಾದ ಸತೀಶ ಅವರನ್ನು ವಿಶೇಷ ಮಾಫಿ ನೀಡಿ ಬಿಡುಗಡೆ ಮಾಡಲಾಯಿತು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ, ಬೆಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಮೀನಾ ದೇಶಪಾಂಡೆ, ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ. ದಿವ್ಯಾ, ಅಧೀಕ್ಷಕ ತಿಮ್ಮಯ್ಯ ಇದ್ದರು.

ಬಿಡುಗಡೆ ಕೈದಿಗಳಿಗೆ ಬ್ಯಾಂಕ್‌ ಸಾಲ ಕೊಡಿಸಿ: ಕಾರಾಗೃಹದಲ್ಲಿ ಕೆಲಸ ಮಾಡುವ ಕೈದಿಗಳಿಗೆ ಸಿಗುವ ದಿನಗೂಲಿ ವೇತನದಲ್ಲೇ ಇಂತಿಷ್ಟು ಹಣವನ್ನು ಭವಿಷ್ಯ ನಿಧಿ ಮಾದರಿಯಲ್ಲಿ ಕಡಿತಗೊಳಿಸಿ, ಸರ್ಕಾರ ಕೂಡ ತನ್ನ ಪಾಲಿನ ಹಣವನ್ನು ನೀಡಿದರೆ ಬಿಡುಗಡೆ ಸಂದರ್ಭದಲ್ಲಿ ಕೈದಿಗಳಿಗೆ ದಂಡ ಪಾವತಿಸಲು ಅನುಕೂಲವಾಗುತ್ತದೆ ಎಂದು ಮೈಸೂರು ಕೇಂದ್ರ ಕಾರಾಗೃಹ ಸಲಹಾ ಮಂಡಳಿ ಸದಸ್ಯ ಪಿ.ವಿ. ನಂಜರಾಜ ಅರಸ್‌ ತಿಳಿಸಿದರು.

ಕಾರಾಗೃಹಗಳಲ್ಲಿ ವಿವಿಧ ಯೋಜನೆಯಡಿ ಕೌಶಲ್ಯ ತರಬೇತಿ ಪಡೆಯುವ ಕೈದಿಗಳು, ಜೈಲಿನಿಂದ ಬಿಡುಗಡೆಯಾದ ಮೇಲೆ ಸ್ವಂತವಾಗಿ ಉದ್ಯಮ ಆರಂಭಿಸಲು ನಾನಾ ನಿಗಮ ಮಂಡಳಿಗಳ ಮೂಲಕ ಅರ್ಜಿ ಸಲ್ಲಿಸಿದರೆ ಬ್ಯಾಂಕ್‌ಗಳು, ಕೈದಿ ಎಂಬ ಕಾರಣಕ್ಕೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಈ ಹಿನ್ನೆ°ಲೆಯಲ್ಲಿ ಸರಕಾರ ಮಧ್ಯಪ್ರವೇಶಿಸಿ, ಬಿಡುಗಡೆಯಾದ ಸಜಾ ಬಂಧಿಗಳಿಗೆ ಬ್ಯಾಂಕುಗಳಿಂದ ಸಾಲ ಕಲ್ಪಿಸಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next