ವಿಜಯಪುರ : ಅಪ್ರಾಪ್ತೆಯನ್ನು ಪುಸಲಾಯಿಸಿ ಮಹಾರಾಷ್ಟ್ರಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಅಪರಾಧಿಗೆ ಜಿಲ್ಲೆಯ ನ್ಯಾಯಾಲಯ 20 ವರ್ಷ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಜಿಲ್ಲೆಯ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಸವಿತಾಕುಮಾರಿ ಪೋಕ್ಸೋ ಕಾಯ್ದೆಯಡಿ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಇಸ್ಲಾಂಪುರ ಬಳಿಯ ಪರಳಿ-ವೈದ್ಯನಾಥ ಗ್ರಾಮದ ನಿವಾಸಿ ರಾಹುಲ್ ಅಮರ ಗೋಸ್ಟಿ (22) ಶಿಕ್ಷೆಗೆ ಗುರಿಯಾದ ಅಪರಾಧಿ.
ಸಂತ್ರಸ್ತ ಬಾಲಕಿಯ ಕುಟುಂಬ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನವರಾಗಿದ್ದು, ಮಹಾರಾಷ್ಟ್ರದ ಇಸ್ಲಾಂಪುರಕ್ಕೆ ಗುಳೆ ಹೋಗಿದ್ದರು. ಅಲ್ಲಿ ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯ ಹೆತ್ತವರನ್ನು ಪರಿಚಯ ಮಾಡಿಕೊಂಡ ರಾಹುಲ್, ಪಾಲಕರು ಮನೆಯಲ್ಲಿ ಇಲ್ಲದಿದ್ದಾಗ ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸಲು ಆರಂಭಿಸಿದ್ದ. ಕೆಲ ದಿನಗಳ ಬಳಿಕ ಬಾಲಕಿಯ ಹೆತ್ತವರು ತಮ್ಮ ಸ್ವಗ್ರಾಮಕ್ಕೆ ಮರಳಿದಾಗ ಬಾಲಕಿಯನ್ನು ಹುಡುಕಿಕೊಂಡು ಇಲ್ಲಿಗೂ ಬಂದಿದ್ದ. ಬಾಲಕಿ ಬಯಲು ಶೌಚಾಲಯಕ್ಕಾಗಿ ಹೋಗಿದ್ದಾಗ, ಆಕೆಯನ್ನು ಸಂಪರ್ಕಿಸಿದ ರಾಹುಲ್, ಮದುವೆ ಆಗುವುದಾಗಿ ಪುಸಲಾಯಿತಿಸಿ ಮಹಾರಾಷ್ಟ್ರಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.
ಈ ಕುರಿತು ಸಂತ್ರಸ್ತೆಯ ಪಾಲಕರು ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ಸಾಕ್ಷಾಧಾರ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರು, ರಾಹುಲ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ವಿ.ಜಿ.ಹಗರಗೊಂಡ ವಾದ ಮಂಡಿಸಿದ್ದರು.