ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಕ್ರಮದ ಬಗ್ಗೆ ತನಿಖೆ ಆರಂಭಿಸಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ ಬುಧವಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಾಧ್ಯಾಹ್ನ 2 ಗಂಟೆ ಸುಮಾರಿಗೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ಹಾಗೂ ಮೈಸೂರು ಜೈಲಿನ ಮುಖ್ಯ ಅಧೀಕ್ಷಕ ಆನಂದ್ ರೆಡ್ಡಿ ಜತೆ ತೆರಳಿದ ವಿನಯ್ ಕುಮಾರ್ ಸಂಜೆ 6 ಗಂಟೆವರೆಗೆ ಅಕ್ರಮ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಈ ವೇಳೆ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಹಾಗೂ ಕರೀಂ ಲಾಲ್ ತೆಲಗಿ ಬಳಸುತ್ತಿದ್ದಾರೆನ್ನಲಾದ ಐಶಾರಾಮಿ ಕೊಠಡಿಗಳಿಗೂ ಭೇಟಿ ನೀಡಿದ್ದಾರೆ. ಬಳಿಕ ಜೈಲಿನ ಅಪರ ಮುಖ್ಯಅಧೀಕ್ಷಕಿ ಅನಿತಾ ಹಾಗೂ ಇತರೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಶಶಿಕಲಾ ಮತ್ತು ತೆಲಗಿ ಬಳಸುತ್ತಿದ್ದ ಕೊಠಡಿಗಳ ದೃಶ್ಯಾವಳಿಗಳು ಹೇಗೆ ಮಾಧ್ಯಮದ ಕೈಸೇರಿತು? ಅಲ್ಲದೇ ಕೊಠಡಿಯೊ ಳಗೆ ಸಿಸಿಟಿವಿ ಅಳವಡಿಸಲು ಕಾರಣ ವೇನು ಎಂಬೆಲ್ಲ ಪ್ರಶ್ನೆಗಳನ್ನು ಅಧಿಕಾರಿ ಗಳಿಗೆ ಕೇಳಿದ್ದಾರೆ. ಇದಕ್ಕೆ ಅಧಿಕಾರಿ ಗಳು ಸಕರಾತ್ಮಕವಾಗಿಯೇ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಜೈಲಿನ ಪ್ರತಿಯೊಂದು ಬ್ಯಾರಕ್‌ಗಳಿಗೂ ಭೇಟಿ ನೀಡಿದ ವಿನಯ್ ಕುಮಾರ್ ಮತ್ತು ತಂಡ ಅಲ್ಲಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಜಾಮರ್‌ಗಳನ್ನು ಪರೀಕ್ಷಿಸಿದ್ದಾರೆ. ಬಳಿಕ ಜೈಲಿನಲ್ಲಿರುವ ಸಿಸಿಟಿವಿ ನಿಯಂತ್ರಣ ಕೊಠಡಿಗೆ ತೆರಳಿ 2-3 ತಿಂಗಳ ಹಿಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.
ಕೈದಿಗಳ ವಿಚಾರಣೆ: ಇದೇ ವೇಳೆ ಡಿಜಿ ಸತ್ಯನಾರಾಯಣರಾವ್ ಹಾಗೂ ಡಿಐಜಿ ರೂಪಾ ಅವರ ಬಣಗಳಲ್ಲಿ ಗುರುತಿಸಿಕೊಂಡಿರುವ ಕೆಲ ಕೈದಿಗ ಳನ್ನು ತನಿಖಾ ತಂಡ ಭೇಟಿ ಮಾಡಿ, ಮಾಹಿತಿ ಸಂಗ್ರಹಿಸಿದೆ. ಆದರೆ, ಕೆಲ ಕೈದಿಗಳು ಹೇಳಿಕೆ ದಾಖಲಿಸಲು ಹಿಂಜರಿದಿದ್ದು, ಅಧಿಕಾರಿಗಳೇ ಧೈರ್ಯದಿಂದ ಮಾಹಿತಿ ನೀಡುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ.
ಕಾರಾಗೃಹದ ಅಕ್ರಮದ ಬಗ್ಗೆ ಹಲವು ಮಹತ್ವದ ದಾಖಲೆಗಳನ್ನು ಕಲೆ ಹಾಕಿರುವ ತಂಡ, ಅಕ್ರಮದಲ್ಲಿ ಈ ಹಿಂದಿನ ಮುಖ್ಯಅಧೀಕ್ಷಕ ಕೃಷ್ಣ ಕುಮಾರ್ ಜತೆ ಹೆಸರು ಕೇಳಿಬಂದಿದ್ದ ಅಪರ ಮುಖ್ಯಅಧೀಕ್ಷಕಿ ಅನಿತಾ ಅವರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಪ್ರಾಥಮಿಕ ತನಿಖೆಯನ್ನು ಈಗಷ್ಟೇ ಆರಂಭಿಸಿದ್ದೇವೆ. ತನಿಖೆ ಮುಗಿಯುವವರೆಗೂ ಪ್ರಕರಣ ಕುರಿತು ಯಾವುದೇ
ಹೇಳಿಕೆ ನೀಡಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಗೃಹ ಇಲಾಖೆಗೆ ಮಾಹಿತಿ ನೀಡುತ್ತೇವೆ. ತನಿಖೆ ಯಾವಾಗ ಮುಗಿಸಲಿದ್ದೇವೆ, ತನಿಖೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಈಗಾಗಲೇ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಅಗತ್ಯ ಬಿದ್ದರೆ ಮತ್ತೂಮ್ಮೆ ಜೈಲಿಗೆ ಬಂದು ಪರಿಶೀಲನೆ ನಡೆಸುತ್ತೇವೆ.
– ವಿನಯ್ ಕುಮಾರ್,
ತನಿಖಾಧಿಕಾರಿ