Advertisement

ಎಂಡೋ ಕೇಂದ್ರದ ಸಂತ್ರಸ್ತರಿಗೆ ಜೈಲಿನ ಅನುಭವ

09:52 AM Aug 04, 2019 | keerthan |

ಕೊಕ್ಕಡ: ಕೊಕ್ಕಡ ಎಂಡೋಪಾಲನ ಕೇಂದ್ರದ ಉಸ್ತುವಾರಿ ನಿರ್ವಹಿಸುತ್ತಿರುವ ಸಿಯೋನ್‌ ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಎಂಡೋ ಸಂತ್ರಸ್ತರ ಪೋಷಕರು ಶಾಸಕರು ಕರೆದ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.

Advertisement

ಹಿಂದೆ ಕನ್ಯಾಡಿಯ ಸೇವಾಭಾರತಿ ಸಂಸ್ಥೆ ಈ ಕೇಂದ್ರವನ್ನು ನಿರ್ವಹಿಸುತ್ತಿತ್ತು. ಕಳೆದ ತಿಂಗಳು ನೆರಿಯದ ಸಿಯೋನ್‌ ಸಂಸ್ಥೆ ಸರಕಾರದ ಟೆಂಡರ್‌ ಮುಖೇನ ಕೇಂದ್ರವನ್ನು ಗುತ್ತಿಗೆಗೆ ಪಡೆದು ನಿರ್ವಹಿಸುತ್ತಿದೆ. ಉಸ್ತುವಾರಿಯ ವರ್ಗಾವಣೆಗೆ ಆರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದ ಪೋಷಕರು ಸೇವಾಭಾರತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಬೇರೊಂದು ಸಂಸ್ಥೆಗೆ ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿಗೆ ಮನವಿಯನ್ನೂ ಸಲ್ಲಿಸಿದ್ದರು.

ವಿರೋಧದ ನಡುವೆಯೂ ನಿರ್ವಹಣೆಗೆ ಪಡೆದುಕೊಂಡ ಸಿಯೋನ್‌ ಸಂಸ್ಥೆಯ ಅಸಮರ್ಪಕ ನಿರ್ವಹಣೆಯ ಕುರಿತು ಪೋಷಕರು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು.

ಆರೋಪಗಳ ಸುರಿಮಳೆ
ಸಂಸ್ಥೆಯ ನಿರ್ವಾಹಕರು ಎಂಡೋಪೀಡಿತ ಮಕ್ಕಳಿಂದ ಪಾಲನ ಕೇಂದ್ರದ ಕೆಲಸಗಳನ್ನು ಒತ್ತಾಯ ಪೂರ್ವಕ ಮಾಡಿಸುವ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪೋಷಕರು ಎಂಡೋಪೀಡಿತ ಮಕ್ಕಳಿಂದ ನೆಲ ಒರೆಸುವುದು, ಪಾತ್ರೆ ತೊಳೆಸುವುದು ಮತ್ತು ಶೌಚಾಲಯ ಶುಚಿ ಮಾಡುವ ಕೆಲಸವನ್ನು ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೆ ಮಕ್ಕಳ ಪೋಷಕರಿಗೆ ಕೇಂದ್ರದ ಒಳಗೆ ಪ್ರವೇಶ ಕೊಡುತ್ತಿಲ್ಲ, ಕೇಂದ್ರದಲ್ಲಿ ಸಿ.ಸಿ. ಕೆಮರಾ ಅಳವಡಿಸಿಲ್ಲ, ಕೇಂದ್ರವನ್ನು ಶುಚಿ ಯಾಗಿರಿಸಿಲ್ಲ, ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಅನ್ನುವ ಗಂಭೀರ ಆರೋಪ ಮಾಡಿದರು.

ಪ್ರವೇಶ ನಿರಾಕರಣೆ ದೂರು
ಸಂತ್ರಸ್ತರಿಗೆ ಸಹಾಯ ನೀಡಲೆಂದು ಬರುವ ವರಿಗೆ, ಸಂತ್ರಸ್ತರ ವಾಹನದ ಸಿಬಂದಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಕೇಂದ್ರಕ್ಕೆ ಎರಡೆರಡು ಬೀಗ ಹಾಕಿ ಜೈಲಿನ ವಾತಾವರಣ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸರಕಾರ ಶಾಶ್ವತ ಪುನರ್ವಸತಿ ಕೇಂದ್ರ ತೆರೆದು ಸಮಸ್ಯೆ ನಿವಾರಿಸಲಿ ಎಂದು ಆಗ್ರಹಿಸಿದರು.

Advertisement

ಸಿಯೋನ್‌ ನಿರಾಕರಣೆ
ಈ ವೇಳೆ ಸಿಯೋನ್‌ ಸಂಸ್ಥೆಯ ಕೊಕ್ಕಡ ಕೇಂದ್ರದ ಉಸ್ತುವಾರಿ ಡಾ| ಸುಭಾಶ್ಚಂದ್ರ ಅವರು ಮಕ್ಕಳ ಬೆಳವಣಿಗೆಗಾಗಿ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆಯೇ ವಿನಾ ಎಲ್ಲವನ್ನೂ ಮಕ್ಕಳಿಂದಲೇ ಮಾಡಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಂತ್ರಸ್ತರ ಬೇಡಿಕೆಗೆ ಆದ್ಯತೆ: ಪೂಂಜ
ಶಾಸಕ ಹರೀಶ್‌ ಪೂಂಜ ಮಾತನಾಡಿ, ಹಿಂದಿನಿಂದಲೂ ಎಂಡೋ ಸಂತ್ರಸ್ತರ ಪರ ಪ್ರತಿಭಟನೆ ನಡೆಸಿದ್ದೇನೆ. ಸಂತ್ರಸ್ತರಿಗೆ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಯತ್ನ ಮಾಡಿದ್ದೇನೆ. ಸಂತ್ರಸ್ತರಿಗೆ ಎಳ್ಳಷ್ಟು ತೊಂದರೆಯಾದರೂ ಸಹಿಸಲು ಸಾಧ್ಯವಿಲ್ಲ ಎಂದು ಅರೋಗ್ಯಾಧಿಕಾರಿಗಳಿಗೆ ತಿಳಿಸಿದರಲ್ಲದೆ, ಸಂತ್ರಸ್ತರ ಪೋಷಕರ ಮಾಹಿತಿಯ ಆಧಾರದಲ್ಲಿ ಕೂಡಲೇ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಜಿ.ಪಂ. ಸದಸ್ಯ ಧರ್ಮಸ್ಥಳದ ಕೊರಗಪ್ಪ ನಾಯ್ಕ, ತಾ. ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ ಕುಲಾಲ್‌, ಸಿಯೋನ್‌ ಸಿಬಂದಿ ಉಪಸ್ಥಿತರಿದ್ದರು.

ಎಂಡೋಪಾಲನ ಕೇಂದ್ರದ ಕಾರ್ಯನಿರ್ವಹಣೆ ಹೇಗೆ ?
ಎಂಡೋ ಸಂತ್ರಸ್ತರನ್ನು ಪ್ರತಿದಿನ ಬೆಳಗ್ಗೆ 8ರ ವೇಳೆಗೆ ಅವರವರ ಮನೆಗಳಿಂದ ಪಾಲನಕೇಂದ್ರಕ್ಕೆ ವಾಹನಗಳ ಮೂಲಕ ಕರೆತರಲಾಗುತ್ತದೆ. ಬೆಳಗ್ಗೆ, ಸಂಜೆ ಉಪಾಹಾರ/ ಮಧ್ಯಾಹ್ನದ ಊಟದ ಜತೆಗೆ ಆರೋಗ್ಯ ಸೇವೆ ಇತ್ಯಾದಿಗಳನ್ನು ಸಂತ್ರಸ್ತರಿಗೆ ನೀಡಲಾಗುತ್ತದೆ. ಸಂಜೆ ಮತ್ತೆ ಮನೆಗಳಿಗೆ ತಲುಪಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next