ಬೆಂಗಳೂರು: ಇಂಗ್ಲಿಷ್ ವ್ಯಾಮೋಹ ಬಿಟ್ಟು ಮಾತೃಭಾಷೆಗೆ ಹೆಚ್ಚು ಒತ್ತು ನೀಡುವ ಕೆಲಸ ಆಗಬೇಕು ಎಂದು ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಪಾಲ ಸಿ.ಎಚ್.ವಿದ್ಯಾಸಾಗರ್ ರಾವ್‌ಅಭಿಪ್ರಾಯಪಟ್ಟರು.
ತೆಲುಗು ವಿಜ್ಞಾನ ಸಮಿತಿ ಹಾಗೂ ಟಿ.ಸುಬ್ಬರಾಮಿರೆಡ್ಡಿ ಲಲಿತಕಲಾ ಪರಿಷತ್ ವತಿಯಿಂದ ನಗರದಲ್ಲಿ ನಡೆದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹಾಗೂ ತೆಲುಗು ನಟ ಡಾ.ರಾಜೇಂದ್ರ ಪ್ರಸಾದ್ ಅವರಿಗೆ “ಶ್ರೀಕೃಷ್ಣ ದೇವರಾಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
“ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. ನಾನು ಯಾವುದೇ ರಾಜ್ಯದಲ್ಲಿದ್ದರೂ ಇದನ್ನೇ ಪ್ರತಿಪಾದಿಸುತ್ತೇನೆ’ ಎಂದು ಹೇಳಿದರು. ಮಾತೃಭಾಷೆಯಲೇ ವ್ಯಾಸಂಗ ಮಾಡಿದವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದನ್ನು ಅರಿತೆ ಬ್ರಿಟಿಷರು ನಮ್ಮ ಮೇಲೆ ಇಂಗ್ಲಿಷ್ ಹೇರಿದರು. ಅದನ್ನು ನಾವು ವ್ಯಾಮೋಹ ಮಾಡಿಕೊಂಡಿದ್ದೇವೆ.
ಪೋಷಕರು ಪ್ರಮುಖವಾಗಿ ಮಾತೃ ಭಾಷೆಯಲ್ಲೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಲು ಮನಸ್ಸು ಮಾಡಬೇಕು ಎಂದು ಹೇಳಿದರು. ಸಚಿವ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, “ತೆಲುಗು ಮತ್ತು ಕನ್ನಡ ಭಾಷೆಗೆ ಸಾಕಷ್ಟು ಸಾಮ್ಯತೆ ಇದೆ. ಕನ್ನಡ ಮತ್ತು ತೆಲುಗು ಭಾಷಿಕರು ಸೌಮ್ಯ ಸ್ವಭಾವದವರು.
ಇಬ್ಬರ ನಡುವೆ ಸಂಘರ್ಷ ಸಂಭವಿಸಿದ ಉದಾಹರಣೆಯೇ ಇಲ್ಲ’ ಎಂದು ಹೇಳಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ, “ಕನ್ನಡ ಮತ್ತು ತೆಲುಗು ಭಾಷೆಗಳನ್ನು 15 ದಿನಗಳಲ್ಲಿ ಕಲಿಯಬಹುದು. ಎರಡೂ ಭಾಷೆಗಳ ಲಿಪಿಯಲ್ಲೂ ಸಾಮ್ಯತೆ ಇದೆ. ಕನ್ನಡ ಮತ್ತು ತೆಲುಗು ಭಾಷಿಕರ ನಡುವೆ ಹಿಂದಿನಿಂದಲೂ ಉತ್ತಮ ಭಾಂದವ್ಯವಿದೆ.
ಕೃಷ್ಣದೇವರಾಯ ಕರ್ನಾಟಕ ಮತ್ತು ಆಂಧ್ರ ಭಾಗದಲ್ಲಿ ಆಳ್ವಿಕೆ ನಡೆಸಿ ಎರಡೂ ಭಾಷೆಗಳ ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡಿದ್ದರು ಎಂದು ಸ್ಮರಿಸಿದರು. ಲಲಿತಕಲಾ ಪರಿಷತ್ ವ್ಯವಸ್ಥಾಪಕ ಅಧ್ಯಕ್ಷ ಡಾ.ಟಿ.ಸುಬ್ಬರಾಮಿರೆಡ್ಡಿ, ಪರಿಷತ್‌ನ ಕರ್ನಾಟಕ ವಿಭಾಗದ ಗೌರವಾಧ್ಯಕ್ಷ ಕೆ.ಶ್ರೀನಿವಾಸಲು ರೆಡ್ಡಿ, ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಕೆ.ಜೆ.ಪುರುಷೋತ್ತಮ್, ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ಡಾ.ಎ.ರಾಧಾಕೃಷ್ಣರಾಜು ಉಪಸ್ಥಿತರಿದ್ದರು.