Advertisement

ಶಿಕ್ಷಣ ಕ್ಷೇತ್ರ ಬದಲಾವಣೆಗೆ ಆದ್ಯತೆ: ಖಾಶೆಂಪೂರ

12:18 PM Sep 30, 2018 | Team Udayavani |

ಬೀದರ: ದೆಹಲಿಯಲ್ಲಿನ ಸರಕಾರಿ ಶಾಲೆಯೊಂದಕ್ಕೆ ಹೋಗಿದ್ದೆ. ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿ ಅಲ್ಲಿ
ಚಟುವಟಿಕೆಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಸರಕಾರಿ ಶಾಲೆಗಳನ್ನು ರೂಪಿಸುವ ಆಲೋಚನೆ ಇದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ಬಗದಲ್‌ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ
ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳನ್ನು ಬಲಗೊಳಿಸಲು ಸರಕಾರ ಸಂಕಲ್ಪ ತೊಟ್ಟಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಸರಕಾರಿ ಶಾಲೆಗಳ ಪ್ರಗತಿಯು ಖಾಸಗಿ ಶಾಲೆಗಳನ್ನು ಮೀರಿಸುವಂತಿರಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲಿ ಶಾಲಾ ಚಟುವಟಿಕೆ, ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿ ಪಾಲಕರ ಪಾಲ್ಗೊಳ್ಳುವಿಕೆ ಹೆಚ್ಚಬೇಕು ಎಂದು ಸಲಹೆ ನೀಡಿದರು. ದೆಹಲಿಯಲ್ಲಿನ ಸರ್ಕಾರಿ ಶಾಲೆಗಳಂತೆ ಇಲ್ಲಿನ ಶಿಕ್ಷಕರು ಕೂಡ ಪಾಠಮಾಡಿ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಬೇಕು ಎಂದರು.

ಚಿಗುರು ಕಾರ್ಯಕ್ರಮದಲ್ಲಿ ಪಾಲಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸಚಿವರು ಬೇಸರ ವ್ಯಕ್ತಪಡಿಸಿದರು.
ಮಕ್ಕಳಲ್ಲಿರುವ ಕಲಾ ಪ್ರತಿಭೆ ಪ್ರದರ್ಶನ ಪಾಲಕರ ಸಮ್ಮುಖದಲ್ಲಿ ನಡೆಯುವಂತೆ ನೋಡಿಕೊಳ್ಳಿ. ಅದರಿಂದ ಶಾಲೆಯ ಬಗ್ಗೆಯೂ ಪಾಲಕರಲ್ಲಿ ಸದಭಿಪ್ರಾಯ ಮೂಡುತ್ತದೆ. ಶಿಕ್ಷಕರು ಮಕ್ಕಳ ಏಳ್ಗೆಗಾಗಿ ಶ್ರಮಿಸುತ್ತಿರುವುದು ಮನವರಿಕೆಯಾಗುತ್ತದೆ ಎಂದು ಸಲಹೆ ನೀಡಿದರು.

ಶಿಕ್ಷಣದಿಂದಲೇ ಸರ್ವಾಂಗೀಣ ವಿಕಾಸ. ಈ ಹಿನ್ನೆಲೆಯಲ್ಲಿಯೇ ಶಿಕ್ಷಣಕ್ಕೆ ಪ್ರಥಮಾದ್ಯತೆ ನೀಡಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿನ ಕುಂದುಕೊರತೆ ನಿವಾರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು. ನಾನು 2004ರಲ್ಲಿ ಶಾಸಕನಾಗಿ ಆಯ್ಕೆಯಾದಾಗಲೂ ಶೈಕ್ಷಣಿಕ ಬೆಳವಣಿಗೆಗೆ ಆಸಕ್ತಿ ವಹಿಸಿದ್ದೆ. 2008ರಲ್ಲಿ ಮರು ಆಯ್ಕೆಯಾದಾಗಲೂ ಶಾಲೆಗಳಿಗೆ ಭೇಟಿ ಮಾಡಿದ್ದೆ. ದೇಶದ ಭವಿಷ್ಯ ರೂಪುಗೊಳ್ಳುವುದೇ ಶಾಲಾ ತರಗತಿ ಕೋಣೆಗಳಲ್ಲಿ ಎನ್ನುವುದು ತಮ್ಮ ಖಚಿತ ಅಭಿಪ್ರಾಯವಾಗಿದೆ ಎಂದರು.
 
ನಮ್ಮ ಮಕ್ಕಳು ಜನ್ಮತಃ ಜಾಣರು. ಆದರೆ, ನಂತರದ ಅವಧಿಯಲ್ಲಿ ಸ್ವಲ್ಪ ಹಿಂದೆ ಬೀಳುತ್ತಿದ್ದಾರೆ. ಮನೆಯಲ್ಲಿನ ವಾತಾವರಣ, ಶಾಲಾ ವಾತಾವರಣ, ಶಾಲೆಯಲ್ಲಿನ ಕಲಿಕೆ ಮತ್ತಿತರ ಕಾರಣಗಳಿಂದಾಗಿ ಮಕ್ಕಳು ಹಿಂದೆ ಬೀಳುವಂತಾಗಿದೆ. ಮಕ್ಕಳಲ್ಲಿನ ಜಾಣ್ಮೆಯನ್ನು, ಪ್ರತಿಭೆಯನ್ನು ಗುರುತಿಸುವ ಕೆಲಸ ಮನೆಯಲ್ಲಿ, ಶಾಲೆಯಲ್ಲಿ ಪರಿಣಾಮಕಾರಿಯಾಗಿ ನಡೆಯಬೇಕು. ಪ್ರೋತ್ಸಾಹ ಹಾಗೂ ಮಾರ್ಗದರ್ಶನವೂ ಸಿಗಬೇಕು. ಅಂದಾಗಲೇ ಮಕ್ಕಳು ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಬಲ್ಲರು ಎಂದು ಹೇಳಿದರು

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸದಸ್ಯ ಅಫೂಜಖಾನ್‌, ತಾಪಂ ಅಧ್ಯಕ್ಷ ವಿಜಯಕುಮಾರ ರಾಮುಲು, ಸದಸ್ಯೆ ಲಲಿತಾಬಾಯಿ ರಾಮಚಂದ್ರ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಧೇನುಸಿಂಗ್‌ ಚವ್ಹಾಣ, ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ್‌, ಮೊರಾರ್ಜಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೆಡೆ, ದೇವಿದಾಸ
ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next