Advertisement

ಬೆಳಗ್ಗೆ ಬಂಡೆದ್ದ ದೀಪಕ ಚಿಂಚೋರೆ ಸಂಜೆಗೆ ತಣ್ಣಗಾದರು!

12:47 PM Apr 18, 2018 | Team Udayavani |

ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ನನಗೆ ಕಾಂಗ್ರೆಸ್‌ ಟಿಕೆಟ್‌ ತಪ್ಪಲು ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಅವರೇ  ಕಾರಣರಾಗಿದ್ದು, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸುವುದಾಗಿ ಕಾಂಗ್ರೆಸ್‌ ಮುಖಂಡ ದೀಪಕ್‌ ಚಿಂಚೋರೆ ಹೇಳಿದರು. 

Advertisement

ಮಂಗಳವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 36 ವರ್ಷಗಳಿಂದ ನಾನು ಕಾಂಗ್ರೆಸ್‌ ಗೆ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತ ಬಂದಿದ್ದೇನೆ.  ಆದರೂ ನನಗೆ ಟಿಕೆಟ್‌ ನೀಡಲಿಲ್ಲ. ಆರಂಭದಲ್ಲಿ ನನಗೆ ಹುಡಾ ಅಧ್ಯಕ್ಷ ಸ್ಥಾನ ಕೊಡಬೇಕು ಎಂದಾಗಿತ್ತು.

ಅದೂ ಸಿಕ್ಕಲಿಲ್ಲ, ನಂತರ  ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದಾಗಿತ್ತು ಅದನ್ನೂ ತಪ್ಪಿಸಲಾಯಿತು. ಕೊನೆಗೆ ಹು-ಧಾ ಪಶ್ಚಿಮ ಕ್ಷೇತ್ರದ ಟಿಕೆಟ್‌ ಕೂಡ  ತಪ್ಪಿ ಹೋಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹು-ಧಾ ಪಶ್ಚಿಮ ಕ್ಷೇತ್ರಕ್ಕೆ ನಾನು ಮತ್ತು ಇಸ್ಮಾಯಿಲ್‌ ತಮಟಗಾರ ಇಬ್ಬರೂ  ಆಕಾಂಕ್ಷಿಗಳಾಗಿದ್ದೆವು.

ಇಬ್ಬರ ಹೆಸರನ್ನು ಮುಖ್ಯಮಂತ್ರಿಗಳು ಮುಂದಿಟ್ಟು ಅವರು ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ ಅಲ್ಲಿ ಪಟ್ಟಿಯಲ್ಲಿ ನನ್ನ ಹೆಸರೇ  ಹೋಗಿಲ್ಲ. ಅದನ್ನು ಜಿಲ್ಲಾ ಉಸ್ತುವಾರಿ ಸಚಿವರೇ ತಪ್ಪಿಸಿದ್ದು, ನನಗೆ ಈ ಬಗ್ಗೆ ತೀವ್ರ ನೋವುಂಟಾಗಿದೆ. ಇಸ್ಮಾಯಿಲ್‌ ತಮಟಗಾರ ಅವರು ಗೆಲ್ಲಬೇಕು. 

ಹೀಗಾಗಿ ನಾನು ಅವರಿಗೆ ಬೆಂಬಲ ನೀಡುತ್ತೇನೆ. ಆದರೆ ಗ್ರಾಮೀಣ ಕ್ಷೇತ್ರದಲ್ಲಿ ಸಚಿವ ವಿನಯ್‌ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ  ಕಣಕ್ಕಿಳಿಯುತ್ತೇನೆ. ನನ್ನ ಶಕ್ತಿ ಏನೆಂದು ಕಾಂಗ್ರೆಸ್‌ ಮುಖಂಡರಿಗೆ ತೋರಿಸುತ್ತೇನೆ ಎಂದು ಚಿಂಚೋರೆ ಹೇಳಿದರು.

Advertisement

ಎರಡು ದಿನದಲ್ಲಿ ಬಂಡಾಯ ಶಮನ: ವಿನಯ್
ಧಾರವಾಡ:
ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಇಲ್ಲ. ನಮ್ಮ ಪಕ್ಷದ ಯಾರೂ ಕೂಡ ಬಿಜೆಪಿಯನ್ನು ಸೇರುವುದು ಅಸಾಧ್ಯವಾಗಿದ್ದು, ಕಾಂಗ್ರೆಸ್‌ನ ಬಂಡಾಯ ಎರಡು ದಿನದಲ್ಲಿ ಶಮನಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಮಂಗಳವಾರ ರಾತ್ರಿ ದೀಪಕ್‌  ಚಿಂಚೋರೆ ನಿವಾಸಕ್ಕೆ ಭೇಟಿ ಕೊಟ್ಟು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಕ್‌  ಚಿಂಚೋರೆಯವರು ಪಕ್ಷದಲ್ಲಿ ನನಗಿಂತಲೂ ಹಿರಿಯರಾಗಿದ್ದಾರೆ. ಸಹಜವಾಗಿ ಅವರಿಗೆ ಟಿಕೆಟ್‌ ತಪ್ಪಿರುವುದು ನೋವು ತಂದಿದೆ. ಆ ಕುರಿತು ಅವರು  ನಮ್ಮೊಂದಿಗೆ ಮಾತನಾಡಿದ್ದಾರೆ.

ನಾನು ಅವರ ಟಿಕೆಟ್‌ ತಪ್ಪುವುದಕ್ಕೆ ಕಾರಣನಲ್ಲ. ಎಲ್ಲ ಕ್ಷೇತ್ರಗಳಲ್ಲಿ 8, 10, 12ರಷ್ಟು ಜನ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿದ್ದು, ಪಕ್ಷ ಒಬ್ಬರನ್ನು ಮಾತ್ರ ಅಭ್ಯರ್ಥಿಯನ್ನಾಗಿಸಬೇಕು. ಹೀಗಾಗಿ ಎಲ್ಲರಿಗೂ ಟಿಕೆಟ್‌ ಸಿಗುವುದು ಅಸಾಧ್ಯ. ದೀಪಕ್‌ ಚಿಂಚೋರೆ  ಅವರಿಗೆ ಆಗಿರುವ ಅಸಮಾಧಾನ ಕುರಿತು ಹಿರಿಯ ಮುಖಂಡರ ಜೊತೆ ಚರ್ಚಿಸುತ್ತೇನೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next