Advertisement

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಿ: ಮುದ್ನಾಳ

01:08 PM Sep 28, 2018 | Team Udayavani |

ಯಾದಗಿರಿ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಆಗ್ರಹಿಸಿದರು. ನಗರದ ಲುಂಬಿನಿ ವನದಲ್ಲಿ ಗುರುವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಅವುಗಳನ್ನು ರಕ್ಷಣೆ ಮಾಡುವುದು ಸರ್ಕಾರದ ಜೊತೆಗೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯಾದಗಿರಿ ಕೋಟೆ, ಶಹಾಪುರ ಬುದ್ಧ ಮಲಗಿದ ಬೆಟ್ಟ, ಮೈಲಾಪುರ, ಚಿಂತನಹಳ್ಳಿ, ನಜರಾಪುರ ಫಾಲ್ಸ್‌, ಮುದನೂರ, ರಾಜನಕೋಳೂರ, ಬೋನ್ಹಾಳ ಪಕ್ಷಿಧಾಮ ಸೇರಿದಂತೆ ಮುಂತಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜನರು, ಅಲ್ಲಿರುವ ಸ್ವತ್ಛ ಪರಿಸರ ಹಾಳು ಮಾಡಬಾರದು ಎಂದು ಸಲಹೆ ನೀಡಿದರು.
 
ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಮಾತನಾಡಿ, ಪ್ರವಾಸೋದ್ಯಮದಲ್ಲಿ ಭಾರತ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ. ಪ್ರವಾಸೋದ್ಯಮ ದಿನ ಆಚರಣೆ ಮಾಡುವುದಷ್ಟೇ ಅಲ್ಲದೇ, ಅದನ್ನು ಕಾರ್ಯರೂಪಕ್ಕೆ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಯಾದಗಿರಿ ಹೃದಯ ಭಾಗದಲ್ಲಿ ಲುಂಬಿನಿ ವನವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಯಾದಗಿರಿ ಕೋಟೆಗೆ ಭೇಟಿ ನೀಡಿದಾಗ ಸ್ವತ್ಛತೆ ಇಲ್ಲದಿರುವುದು ಕಂಡು ಬಂತು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಕಾಳಜಿ ವಹಿಸಿ ಸ್ವತ್ಛತೆ ಜೊತೆಗೆ ಅಭಿವೃದ್ಧಿ ಪಡಿಸಬೇಕು ಎಂದು ಸೂಚಿಸಿದರು.
 
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪೂರ್ಣಿಮಾ ಚೂರಿ ಮಾತನಾಡಿ, ಸರ್ಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುತ್ತಿದೆ. ಪ್ರವಾಸೋದ್ಯಮ ತಾಣ ಅಭಿವೃದ್ಧಿಗೊಂಡಷ್ಟು ಉದ್ಯೋಗ ಸೃಷ್ಟಿ ಆಗುತ್ತವೆ. ಅಲ್ಲದೇ, ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ
ಎಂದು ತಿಳಿಸಿದರು. 

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಜನಿಕಾಂತ ಮಾತನಾಡಿ, ಡಿಜಿಟಲ್‌ ಮೀಡಿಯಾ ಬಳಸಿಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ. ಜಿಲ್ಲೆಯಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇತಿಹಾಸ ತಜ್ಞ ಡಾ| ಭೀಮರಾಯ ಲಿಂಗೇರಿ ಉಪನ್ಯಾಸ ನೀಡಿ, ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಜೊತೆಗೆ ಭಾವೈಕ್ಯತಾ ಸ್ಥಳಗಳು ಕೂಡ ಪ್ರವಾಸಿ ತಾಣಗಳಾಗಿವೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಪರಿಸರವನ್ನು ಪ್ರೀತಿಸದೆ ಇದ್ದರೆ ಮನುಷ್ಯನ ಜೀವನ ನಿರರ್ಥಕ ಎಂದರು.

ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ಸಮವಸ್ತ್ರ ಮತ್ತು ಶೂ ವಿತರಿಸಲಾಯಿತು. ತಹಶೀಲ್ದಾರ್‌ ಆಶಪ್ಪ, ಮಹಿಳಾ ಅಭಿವೃದ್ಧಿ ನಿಗಮದ ಸುಮಂಗಲಾ, ಪ್ರವಾಸೋದ್ಯಮ ಪ್ರಮೋಟರ್‌ ಮೇಘನಾಥ ಬೆಳ್ಳಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next