Advertisement

ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಆದ್ಯತೆ

03:08 PM Oct 25, 2018 | Team Udayavani |

ಶಿಡ್ಲಘಟ್ಟ: ರಾಜ್ಯದಲ್ಲಿರುವ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ನಾಗರಿಕರಿಗೆ ಅನುಕೂಲ ಕಲ್ಪಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಿಂದ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿವರೆಗೆ 50 ಕೋಟಿ ರೂ.ಗಳ ವೆಚ್ಚದಲ್ಲಿ ಜೋಡಿ ರಸ್ತೆಯನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

Advertisement

ತಾಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ನೂತನ ಸಾರಿಗೆ ಬಸ್‌ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವಿಶೇಷ ಆದ್ಯತೆ ನೀಡಲಾಗಿದೆ. ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. 

ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಆದ್ಯತೆ ನೀಡಲಾಗಿದೆ. ಈಗಾಗಲೇ ಕೈವಾರದಿಂದ ವೈ.ಹುಣಸೇನಹಳ್ಳಿ- ಕುಂದಲಗುರ್ಕಿ ಮಾರ್ಗವಾಗಿ ಏನಿಗದಲೆವರೆಗೆ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಹಾಗೆಯೇ ವಿಜಯಪುರದಿಂದ ದಿಬ್ಬೂರಹಳ್ಳಿವರೆಗೆ ಜೋಡಿ
ರಸ್ತೆಯನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗ್ರಾಮದಲ್ಲಿ ಕಾಲೇಜು ನಿರ್ಮಾಣಕ್ಕೆ ಪ್ರಯತ್ನ: ಕುಂದಲಗುರ್ಕಿ ಗ್ರಾಪಂ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕುಂದಲಗುರ್ಕಿ ಗ್ರಾಮದಲ್ಲಿ ಪಿಯು ಕಾಲೇಜು ಮಂಜೂರು ಮಾಡಿಸಲು ಈಗಾಗಲೇ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ.
 
ರಾಜ್ಯದಲ್ಲಿ ಉಪಚುನಾವಣೆಗಳು ಮುಗಿದ ಬಳಿಕ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಕುಂದಲಗುರ್ಕಿ ಗ್ರಾಮದಲ್ಲಿ ಪಶು ಆಸ್ಪತ್ರೆಯನ್ನು ಸ್ಥಾಪಿಸಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

1 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣ: ಕುಂದಲಗುರ್ಕಿ ಗ್ರಾಮದ ಸುತ್ತಮುತ್ತಲಿನ ಜನರು ಮತ್ತು ಚಿಂತಾಮಣಿ ತಾಲೂಕಿನ ಜನರ ಅನುಕೂಲಕ್ಕಾಗಿ ಅಣೆಕಟ್ಟು ನಿರ್ಮಿಸಲು ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ. ಸುಮಾರು 1 ಕೋಟಿ ರೂ. ಗಳ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸಲು ಸಂಬಂಧಿಸಿದ ಎಂಜಿನಿಯರ್‌ಗಳ ಮೂಲಕ ಸ್ಥಳ ಪರಿಶೀಲಿಸಿ ಯೋಜನಾ ಪಟ್ಟಿಯನ್ನು ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಬಹುದಿನಗಳ ಬೇಡಿಕೆ ಈಡೇರಿಕೆ: ಕುಂದಲಗುರ್ಕಿ ಗ್ರಾಮದಿಂದ ಶಿಡ್ಲಘಟ್ಟ ಮಾರ್ಗವಾಗಿ ಬೆಂಗಳೂರಿಗೆ ಸಾರಿಗೆ ಬಸ್‌ ಸಂಚಾರವನ್ನು ಆರಂಭಿಸಲು ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಗ್ರಾಮಸ್ಥರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಾರಿಗೆ ಬಸ್‌ನಲ್ಲಿ ಸಂಚಾರ ಮಾಡುವ ಮೂಲಕ ಇಲಾಖೆಗೆ ಆದಾಯ ತರುವ ಜೊತೆಗೆ ಗ್ರಾಮೀಣ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

ಸಾರಿಗೆ ಬಸ್‌ ಸಂಚಾರ ಪ್ರಾರಂಭ: ಸಾರಿಗೆ ಸಂಸ್ಥೆಯ ಬಾಗೇಪಲ್ಲಿ ಘಟಕದ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ಮಾತನಾಡಿ, ಪ್ರಾಯೋಗಿಕವಾಗಿ ಬಾಗೇಪಲ್ಲಿಯಿಂದ ಚೇಳೂರು, ಏನಿಗದಲೇ, ಕುಂದಲಗುರ್ಕಿ, ವೈ.ಹುಣಸೇನಹಳ್ಳಿ ಮಾರ್ಗವಾಗಿ ಶಿಡ್ಲಘಟ್ಟದಿಂದ ಬೆಂಗಳೂರಿಗೆ ಎರಡು ಸಿಂಗಲ್‌ ಬಸ್‌ ಸಂಚಾರವನ್ನು ಆರಂಭಿಸಿದ್ದೇವೆ. ಗ್ರಾಮಸ್ಥರ ಸ್ಪಂದನೆ ಆಧರಿಸಿ ಮತ್ತೂಂದು ಬಸ್‌ ಸಂಚಾರ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲು ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಂದಲಗುರ್ಕಿ ಗ್ರಾಪಂ ಅಧ್ಯಕ್ಷೆ ಕಲ್ಪನಾ, ಮಾಜಿ ಅಧ್ಯಕ್ಷ ಕೆ.ಎಂ.ವೆಂಕಟೇಶ್‌, ರಾಮಚಂದ್ರರೆಡ್ಡಿ, ಕೆ.ಸಿ.ರೆಡ್ಡಿ, ಸಾರಿಗೆ ಸಂಸ್ಥೆಯ ಅಧಿಕಾರಿ ವಾಜೀದ್‌, ಮುಖಂಡರಾದ ಮುನಿರೆಡ್ಡಿ, ಪಿಡಿಒ ವಿ.ಶ್ರೀನಿವಾಸಪ್ಪ, ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಮುನೀಂದ್ರ, ಶಾಸಕರ ಆಪ್ತ ಸಹಾಯಕ ನಾರಾಯಣಗೌಡ, ವಾಲ್ಮೀಕಿ ಯುವರ ಘಟಕದ ಅಧ್ಯಕ್ಷ ಮೇಲೂರು ಗಿರೀಶ್‌ ನಾಯಕ, ಮುತ್ತೂರು ವೆಂಕಟೇಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next