ಕೊಡಿಯಾಲ್‌ಬೈಲ್: ರಜತ ವರ್ಷಾಚರಣೆಯ ಸಂಭ್ರಮದಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನಡೆಯಲಿರುವ ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನ ಸಮಾರಂಭವು ವಿದ್ಯಾಸಂಸ್ಥೆಯ ಶ್ರೀ ಶರವು ಮಹಾಗಣಪತಿ ವೇದಿಕೆಯಲ್ಲಿ ಸೋಮವಾರ ಜರಗಿತು.
ಶ್ರೀ ಸನಾತನಾ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ, ಮಕ್ಕಳ ಮನಸ್ಸನ್ನು ಅರಳಿಸುವ ನೃತ್ಯ ಸಂಗೀತ ಹಾಗೂ ಶಿಕ್ಷಣಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಬೇಕೇ ಹೊರತು ಅವರ ಮನಸ್ಸನ್ನು ಕೆರಳಿಸುವ ಚಟುವಟಿಕೆಗಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್ ಮಾತನಾಡಿ, ಕೇವಲ ಓದು-ಬರಹಕ್ಕಷ್ಟೇ ಸೀಮಿತವಾದ ಶಿಕ್ಷಣದಿಂದ ವಿದ್ಯಾರ್ಥಿಗಳ ವ್ಯಕ್ತಿತ್ವದ ಸಂಪೂರ್ಣ ವಿಕಾಸ ಸಾಧ್ಯವಿಲ್ಲ. ಪಾಠ್ಯೇತರ ಚಟುವಟಿಕೆಗಳಾದ ಕಲೆ-ಕ್ರೀಡೆ, ಭಾಷಣ-ಲೇಖನ ಮತ್ತು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡಾಗ ವ್ಯಕ್ತಿತ್ವವು ಅರಳುತ್ತದೆ. ಭಾರತೀಯರಾದ ನಮಗೆಲ್ಲರಿಗೂ ಬಾಲ್ಯದಿಂದಲೇ ಭಾರತೀಯ ಸಂಸ್ಕೃತಿ, ಪರಂಪರೆ, ಜೀವನ ಮೌಲ್ಯಗಳ ಕಲೆ-ಸಂಸ್ಕೃತಿಗಳ ಶಿಕ್ಷಣ ಸಂಸ್ಕಾರ ಸಿಗಬೇಕು ಎಂದು ತಿಳಿಸಿದರು.
ಶಾರದಾ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಶಾರದಾ ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಹಾಬಲೇಶ್ವರ ಭಟ್, ವಿದ್ಯಾಲಯ ಪ್ರಾಂಶುಪಾಲೆ ಸುನೀತಾ ವಿ. ಮಡಿ ಉಪಸ್ಥಿತರಿದ್ದರು.
ವಿದ್ಯಾಲಯದ ಉಪ-ಪ್ರಾಂಶುಪಾಲ ದಯಾನಂದ ಕಟೀಲ್ ಸ್ಪರ್ಧೆಗಳ ಮಾಹಿತಿ, ನಿಯಮ-ನಿಬಂಧನೆಗಳನ್ನು ಮತ್ತು ಸೂಚನೆಗಳನ್ನು ನೀಡಿದರು. ಈ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಚಿತ್ರಕಲೆ, ರಂಗೋಲಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ, ಗೀತಾ ಕಂಠಪಾಠ, ಹೂ-ಹಾರ ಕಟ್ಟುವ ಸ್ಪರ್ಧೆಗಳು ನಡೆಯಿತು. ಶಿಶು-ಬಾಲ-ಕಿಶೋರ ಮುಂತಾದ ವಿಭಾಗಗಳಲ್ಲಿ ಸ್ಪರ್ಧೆಗಳು ಜರಗಿದವು. ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ಹಾಗೂ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಶಿಕ್ಷಕಿ ರಮ್ಯಾ ರೈ ಸ್ವಾಗತಿಸಿದರು. ಶೀಲಾಕ್ಷಿ ವಂದಿಸಿದರು. ಶ್ರೀಪತಿ ಭಟ್ ನಿರೂಪಿಸಿದರು.