Advertisement

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

06:08 PM May 03, 2024 | Team Udayavani |

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ, ಕೈಗಾರಿಕೆಗಳ ಬೆಳವಣಿಗೆ ಮೂಲಕ ಉದ್ಯೋಗ ಸೃಷ್ಟಿಯೊಂದಿಗೆ
ಆರ್ಥಿಕಾಭಿವೃದ್ಧಿ ಬೆಳವಣಿಗೆಗೆ ಒತ್ತು ನೀಡುವೆ, ನನ್ನ ರಾಜಕೀಯ ಅನುಭವ ಕ್ಷೇತ್ರದ ಹಿತ-ಅಭಿವೃದ್ಧಿಗಾಗಿ ಧಾರೆಯೆರೆಯುವೆ.
ಇದು ನನ್ನ ಬದ್ಧತೆ ಹಾಗೂ ಕ್ಷೇತ್ರದ ಮತದಾರರಿಗೆ ನನ್ನ ವಾಗ್ಧಾನ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅನಿಸಿಕೆ. ಸಂಸದರಾಗಿ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ತಮ್ಮ
ಚಿಂತನೆ, ನೀಲನಕ್ಷೆ ಏನೆಂಬುದರ ಕುರಿತಾಗಿ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದಿಷ್ಟು.

Advertisement

ಉದಯವಾಣಿ ಸಮಾಚಾರ
*ಚುನಾವಣಾ ಪ್ರಚಾರ ಹೇಗಿದೆ?
ಪ್ರಚಾರದಲ್ಲಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಜನ ಸೇರ ತೊಡಗಿದ್ದಾರೆ. ಎಲ್ಲ ವರ್ಗ ಹಾಗೂ ಎಲ್ಲ ಧರ್ಮಗಳ ಜನರು ಅದರಲ್ಲೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಅತ್ಯಂತ ಉತ್ಸಾಹದಿಂದ ಪ್ರಚಾರ ವೇಳೆ ಆಗಮಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ-ಬಿಜೆಪಿ ಪರವಾದ ದೊಡ್ಡ ಅಲೆಯೇ ಎದ್ದಿದೆ. ಜನರ ಉತ್ಸಾಹ ಹೆಚ್ಚುತ್ತಿರುವುದು ನಮ್ಮ ಹುಮ್ಮಸು ಹೆಚ್ಚುವಂತೆ ಮಾಡಿದೆ.

*ಚುನಾವಣೆ ಗೆಲ್ಲಲು ನಿಮ್ಮ ತಂತ್ರಗಾರಿಕೆ ಏನು?
ಸಿಂಪಲ್‌, ಜನರ ಬಳಿಗೆ ಹೆಚ್ಚು, ಹೆಚ್ಚು ಹೋಗಬೇಕು. ಅವರೊಂದಿಗೆ ಬೆರೆಯಬೇಕು. ಸಂಸದನಾದರೆ ಕ್ಷೇತ್ರದ ಅಭಿವೃದ್ಧಿ-ಜನರ ಹಿತದೃಷ್ಟಿಯಿಂದ ಏನೆಲ್ಲಾ ಮಾಡಲು ಸಾಧ್ಯ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಕ್ಷೇತ್ರದಲ್ಲಿ ಇದುವರೆಗೆ ನಾನು ಸುಮಾರು 300ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಪ್ರಚಾರಕ್ಕೆ ಹೆಚ್ಚು ಕಾಲಾವಕಾಶ ಸಿಕ್ಕಿರುವುದು ಸಹ ಹೆಚ್ಚು, ಹೆಚ್ಚು ಮತದಾರರ ಭೇಟಿಗೆ ಸಾಧ್ಯವಾಗುತ್ತಿದೆ.

*ಪ್ರಚಾರದಲ್ಲಿ ಎದುರಿಸಿದ ಸವಾಲುಗಳೇನು?
ಹಾವೇರಿ-ಗದಗ ಲೋಕಸಭಾ ಕ್ಷೇತ್ರ ನನಗೇನು ಹೊಸದಲ್ಲ. ಕ್ಷೇತ್ರದ ಸಾಕಷ್ಟು ಪರಿಚ ಯವಿದೆ. ಪ್ರಚಾರದಲ್ಲಿ ಜನರ ಉತ್ಸಾಹ ಹೆಚ್ಚುತ್ತಿದೆಯೇ ವಿನಃ ಸವಾಲು ಎನ್ನುವಂತಹದ್ದೇನೂ ನನಗೆ ಕಂಡು ಬಂದಿಲ್ಲ. ಉರಿಬಿಸಿಲು ಸವಾಲು ಎನ್ನುವುದು ಬಿಟ್ಟರೆ ರಾತ್ರಿ ತಡವಾದರೂ ಜನರು ಅದೇ ಉತ್ಸಾಹದಿಂದ ಕಾಯ್ದು ನಿಂತಿರುತ್ತಾರೆ ಅದು ಬಿಜೆಪಿ ಪರ ಒಲವಿಗೆ ಸಾಕ್ಷಿಯಾಗಿದೆ.

*ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಪರಿಕಲ್ಪನೆ ಹಾಗೂ ಭರವಸೆಗಳೇನು?
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ನನ್ನದೇಯಾದ ಪರಿಕಲ್ಪನೆ ಹೊಂದಿದ್ದೇನೆ. ಇದಕ್ಕೆ ಪೂರಕವಾಗಿ ಹಲವು ವಿಷಯಗಳಲ್ಲಿ ಭದ್ರ ಬುನಾದಿ ಹಾಕುವಲ್ಲಿ ಪ್ರತ್ಯೇಕ್ಷವಾಗಿ ಇಲ್ಲವೆ ಪರೋಕ್ಷವಾಗಿ ನನ್ನ ಪಾತ್ರವೂ ಇದೆ. ಮುಖ್ಯವಾಗಿ ನೀರಾವರಿ, ಕೈಗಾರಿಕಾ ಬೆಳವಣಿಗೆ ನನ್ನ ಆದ್ಯತೆ. ತುಂಗಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಸುಮಾರು 1ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ. ಬಹುತೇಕ ಕಾಮಗಾರಿ ಮುಗಿದಿದ್ದು, ಏತ ನೀರಾವರಿ ಯೋಜನೆಗಳಲ್ಲಿ ಶೇ.95 ಕಾಮಗಾರಿ ಪೂರ್ಣಗೊಂಡಿದ್ದು, ಅವುಗಳನ್ನು ಪೂರ್ಣಗೊಳಿಸಿ ರೈತರಿಗೆ ನೀರೊದಗಿಸುವುದಾಗಿದೆ. ಇನ್ನು ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಸಿಂಗಟಾಲೂರು ನೀರಾವರಿ ಯೋಜನೆಯನ್ನು ಅಂದಾಜು 850 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಯೋಜನೆ 3ನೇ ಹಂತದಲ್ಲಿ ಸೂಕ್ಷ್ಮ ನೀರಾವರಿ(ಹನಿ ನೀರಾವರಿ)ಅಳವಡಿಕೆ ಬಗ್ಗೆ ಯೋಚಿಸಬೇಕಿದೆ.

Advertisement

ಮಧ್ಯಪ್ರದೇಶ ಮಾದರಿ ಅಳವಡಿಕೆ ಚಿಂತನೆ ಇದ್ದು, ಡಿಪಿಆರ್‌ ಪರಾಮರ್ಶಿಸುವೆ. ಹಾವೇರಿಯಲ್ಲಿ 400 ಎಕರೆಯಷ್ಟು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲಾಗು ತ್ತಿದ್ದು, ನನ್ನ ಕಾಲದ ಯೋಜನೆಗೆ ಮುಖ್ಯಮಂತ್ರಿಯವರು ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕ್ಷೇತ್ರದ ಎಲ್ಲ ತಾಲೂಕುಗಳಲ್ಲಿ ಕೈಗಾರಿಕೆ ವಿಸ್ತರಣೆಯಾಗಬೇಕು. ಗದಗನಲ್ಲಿ ಆಹಾರ ಸಂಸ್ಕರಣೆ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ನೇಕಾರರು ಅಧಿಕವಾಗಿದ್ದು, ಜವಳಿ ಪಾರ್ಕ್‌ ಆಗಬೇಕು. ಎಣ್ಣೆಕಾಳು, ಹತ್ತಿ, ಮೆಣಸಿನಕಾಯಿ ಬೆಳೆ ಅಧಿಕವಾಗಿದ್ದು, ಇದಕ್ಕೆ ಪೂರಕ ಉದ್ಯಮಗಳು ಬರಬೇಕಿದೆ. ರಾಣೆಬೆನ್ನೂರಿನಲ್ಲಿ ಮೆಕ್ಕೆಜೋಳ ಸಂಗ್ರಹಕ್ಕೆ ಶೈತ್ಯಾಗಾರಗಳ ನಿರ್ಮಾಣ, ಒಣಮೆಣಸಿಕಾಯಿ ಮೌಲ್ಯವರ್ಧನೆ ಹಾಗೂ ಮೆಣಸಿನಕಾಯಿ ಹಲವು ಉತ್ಪನ್ನಗಳು ಕೇರಳದಲ್ಲಿ ಉತ್ಪಾದನೆ ಆಗುತ್ತಿದ್ದು, ಉತ್ಪಾದನೆ, ಪ್ಯಾಕೇಜಿಂಗ್‌ ಇಲ್ಲಿಯೇ ಆಗಬೇಕು. ಆ ಮೂಲಕ ಇರುವ ಸಂಪನ್ಮೂಲ ಬಳಕೆ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿ ಆಗಲಿದೆ.

*ಮೋದಿ ಅಲೆ ಅಥವಾ ಬೇರೆ ಯಾವ ಅಂಶಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ?
ಮೋದಿ ಅಲೆ ಖಂಡಿತಾ ಮಹತ್ವದ ಸಾಥ್‌ ನೀಡಲಿದೆ. ಮೋದಿ ಹಾಗೂ ಬಿಜೆಪಿ ಪರ ದೊಡ್ಡ ಗಾಳಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನರಿಗೆ ಸಮರ್ಪಕ ಸೌಲಭ್ಯಗಳು ದೊರೆಯುತ್ತಿಲ್ಲ. ಜನರು ರೋಸಿ ಹೋಗಿದ್ದಾರೆ. ಆಡಳಿತ-ಹಣಕಾಸು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ. ದೇಶದ ಹಿತ-ಸುರಕ್ಷತೆ ದೃಷ್ಟಿಯಿಂದ ಮೋದಿಯವರು ಪ್ರಧಾನಿ ಆಗಬೇಕೆಂಬ ಬಯಕೆ ಹಾವೇರಿ-ಗದಗ ಕ್ಷೇತ್ರ ಹಾಗೂ ದೇಶದ ಜನತೆಯದ್ದಾಗಿದೆ.

*ಜನ ನಿಮ್ಮನ್ನು ಯಾಕೆ ಬೆಂಬಲಿಸಬೇಕು?
ಹಾವೇರಿ ಜಿಲ್ಲೆಯಾಗಿ ರಚನೆ ನಂತರ ಕಾಂಗ್ರೆಸ್‌ ಆಡಳಿತದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ನಮ್ಮ ಸರ್ಕಾರದಲ್ಲಿ ಇಂಜಿನಿಯರಿಂಗ್‌ ಕಾಲೇಜು, ಕಾನೂನು, ತೋಟಗಾರಿಕೆ, ಕೃಷಿ ಕಾಲೇಜುಗಳ ಆರಂಭ, 450 ಕೋಟಿ ರೂ.ಅಂದಾಜು ವೆಚ್ಚದಲ್ಲಿ ವೈದ್ಯಕೀಯ ಕಾಲೇಜು, ಪ್ರತೇಕ ಹಾಲು ಒಕ್ಕೂಟಕ್ಕೆ 120 ಕೋಟಿ ರೂ. ನೀಡಿಕೆ, ಹಾಲು ಪ್ಯಾಕೇಜಿಂಗ್‌ ಘಟಕಕ್ಕೆ 25 ಕೋಟಿ ರೂ. ಬಿಡುಗಡೆ, ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್‌ನಿಂದ 5 ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆತಿದ್ದು, ಇನ್ನೆರಡು ತಿಂಗಳಲ್ಲಿ 20 ಸಾವಿರ ಮಹಿಳೆಯರು ಉದೋಗ ಪಡೆಯಲಿದ್ದಾರೆ. ಕ್ಷೇತ್ರದ ಜನತೆ ನನ್ನ ಬಗ್ಗೆ ದೊಡ್ಡ ನಿರೀಕ್ಷೆ ಇರಿಸಿದ್ದು, ರಾಜಕೀಯ ಅನುಭವವನ್ನು ಕ್ಷೇತ್ರದ ಅಭಿವೃದ್ಧಿಗೆ ಧಾರೆಯೆರೆಯುವೆ.

*ನಿಮ್ಮ ಎದುರಾಳಿ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಯಾವುದೇ ಚುನಾವಣೆ ಇರಲಿ, ಎದುರಾಳಿ ಅಭ್ಯರ್ಥಿ ಯಾರೇ ಇರಲಿ ಗಂಭೀರವಾಗಿ ಪರಿಗಣಿಸಿ ಚುನಾವಣಾ ಕಣಕ್ಕಿಳಿಯುತ್ತೇನೆ. ಲೋಕಸಭಾ ಚುನಾವಣೆಯಲ್ಲೂ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿದ್ದೇನೆ. ಹಾವೇರಿ-ಗದಗ ಕ್ಷೇತ್ರದ ಎಂಟು ಶಾಸಕರಲ್ಲಿ ಏಳು ಜನ ಕಾಂಗ್ರೆಸ್‌ ಶಾಸಕರಿದ್ದಾರೆ. ಆದರೆ ಮತದಾರರ ಒಲವು ಮಾತ್ರ ಬಿಜೆಪಿ ಕಡೆ ಇದೆ ಎಂಬುದು ಪ್ರಚಾರ ವೇಳೆ ವ್ಯಕ್ತವಾಗುತ್ತಿದೆ. ಜನ ಪ್ರೀತಿಯಿಂದ ಬೆಂಬಲ ನೀಡತೊಡಗಿದ್ದಾರೆ.

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next