Advertisement

ಮೂಲಭೂತ, ಅತ್ಯಗತ್ಯ ಯೋಜನೆಗೆ ಆದ್ಯತೆ

11:24 AM Mar 09, 2021 | Team Udayavani |

ಶಿಕ್ಷಣ ಕ್ಷೇತ್ರದಿಂದ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಿರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಘೋಷಣೆಯ ನಂತರ ರಾಜ್ಯಗಳ ಜವಾಬ್ದಾರಿಯೂ ಹೆಚ್ಚಾಗಿದೆ. ರಾಜ್ಯ ಬಜೆಟ್‌ನಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆಯಾದರೂ,\ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೆಳಹಂತದಲ್ಲಿ ಅನುಷ್ಠಾನಕ್ಕೆ ಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟತೆ ನೀಡಿಲ್ಲ.

Advertisement

ಭಾರತೀಯ ವೈದ್ಯ ಪದ್ಧತಿ ಉತ್ತೇಜಿಸಲು ಹಾಗೂ ಸಂಶೋಧನೆಯನ್ನು ಪ್ರೋತ್ಸಾಹಿಸಲು ಶಿವಮೊಗ್ಗ ಜಿಲ್ಲೆಯಲ್ಲಿ ಆಯುರ್ವೇದ ಕಾಲೇಜನ್ನು ಆಯುಷ್‌ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಮಾಡಲಾಗಿದೆ. ಈಗಾಗಲೇ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದಲೇ ಎಲ್ಲ ಮಾದರಿಯ ವೈದ್ಯಕೀಯ ಕಾಲೇಜುಗಳ ಉಸ್ತುವಾರಿ ನೋಡಿಕೊಳ್ಳಲಾಗುತ್ತಿದೆ. ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆ ಸ್ವಾಯತ್ತ ರೀತಿಯಲ್ಲಿ ಇರಲಿದೆಯೇ ಅಥವಾ ರಾಜೀವ್‌ ಗಾಂಧಿ ವಿವಿಯ ಅಧೀನದಲ್ಲೇ ಬರಲಿದೆಯೇ ಎಂಬುದರ ಬಗ್ಗೆ ಗೊಂದಲವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನ ಮಾಡುವ ಬಗ್ಗೆ ಯಾವುದೇ ಕಾರ್ಯಕ್ರಮ ಘೋಷಣೆ ಇಲ್ಲ. ಸಾರ್ವಜನಿಕ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜಿನ ಸ್ಥಾಪನೆಯ ಪ್ರಾಯೋಗಿಕ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.

ಸರ್ಕಾರಿ ಪದವಿ, ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ರೂಂ ರಚನೆಗೆ 50 ಕೋಟಿ ರೂ. ಮೀಸಲಿಡಲಾಗಿದೆ. ಹಾಗೆಯೇ ಎಲ್ಲ ಪ್ರೌಢಶಾಲೆಗಳಲ್ಲಿಯೂ ಕಂಪ್ಯೂಟರ್‌ ಲ್ಯಾಬ್‌ ಸ್ಥಾಪಿಸುವ ಪ್ರಸ್ತಾಪ ಮಾಡಲಾಗಿದೆ. ಶಾಲೆಗಳ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆಯಾದರೂ, ಒಟ್ಟಾರೆಯಾಗಿ ಮೀಸಲಿಟ್ಟಿರುವ ಅನುದಾನದ ಬಗ್ಗೆ ವಿವರ ಇಲ್ಲ. ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ವಿಶೇಷವಾಗಿ ಏನೂ ಸಿಕ್ಕಿಲ್ಲ. ಶೈಕ್ಷಣಿಕ ಸುಧಾರಣೆ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೆಲವೊಂದು ಅಂಶಗಳು ಸ್ವಾಗತಾರ್ಹವಾಗಿದೆ. ಶೈಕ್ಷಣಿಕ ನಾಯಕತ್ವ ಕಾರ್ಯಕ್ರಮವೂ ಅತ್ಯಂತ ಸ್ವಾಗತಾರ್ಹವಾಗಿದೆ. ಆದರೆ, ಈ ಕಾರ್ಯಕ್ರಮವೂ ದೇಶೀಯ ನೆಲೆಗಟ್ಟಿನಲ್ಲಿ ಅನುಷ್ಠಾನಕ್ಕೆ ಬರಬೇಕು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ರೂಪಿತವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next