Advertisement

ಬಸ್‌ಗಳಲ್ಲಿ ಸುರಕ್ಷೆ ಕ್ರಮಗಳಿಗೆ ಆದ್ಯತೆ ಸಿಗಲಿ

12:00 PM Apr 10, 2022 | Team Udayavani |

ಹಂಪನಕಟ್ಟೆ: ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷೆ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಿದೆ.

Advertisement

ಶುಕ್ರವಾರ ನಗರದ ಹಂಪನಕಟ್ಟೆ ಸಿಗ್ನಲ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಸಿಟಿ ಬಸ್‌ ಸುಟ್ಟು ಹೋಗಿತ್ತು. ಅದೃಷ್ಟವಶಾತ್‌ ಪ್ರಯಾಣಿಕರು ಪಾರಾಗಿದ್ದಾರೆ. ಆದರೆ ಇಂತಹ ಅಪಘಾತ, ಬೆಂಕಿ ಅವಘಡಗಳು ಸಂಭವಿಸಿದರೆ ತುರ್ತು ಸಹಾಯ, ಕಾರ್ಯಾಚರಣೆಗೆ ನೆರವಾಗುವ ಅಗತ್ಯ ಪರಿಕರಗಳು ಕೆಲವು ಬಸ್‌ಗಳಲ್ಲಿ ಇಲ್ಲ.

ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತುರ್ತು ನಿರ್ಗಮನ ದ್ವಾರ ಬಸ್‌ಗಳಲ್ಲಿ ಕಡ್ಡಾಯವಾಗಿ ಇರಬೇಕು ಎಂಬ ನಿಯಮವಿದ್ದರೂ ಸಮರ್ಪಕವಾಗಿ ಪಾಲನೆ ಯಾಗುತ್ತಿಲ್ಲ. ಅಗ್ನಿಶಮನ ಉಪಕರಣಗಳು ಹೆಚ್ಚಿನ ಬಸ್‌ಗಳಲ್ಲಿ ಇಲ್ಲ.

ಸಮಯದೊಂದಿಗೆ ಓಡಾಟ!

ಹೆಚ್ಚಿನ ಸಿಟಿಬಸ್‌ಗಳು ಸಮಯದ ಪರಿಪಾಲನೆ ಗಾಗಿ ಕೆಲವೊಮ್ಮೆ ವೇಗವಾಗಿ ಸಂಚರಿಸುತ್ತವೆ. ಒಂದು ಕಡೆ ಸಂಚಾರದಟ್ಟಣೆಯಲ್ಲಿ ಸಿಲುಕಿ ಹಾಕಿ ಕೊಂಡರೆ ಅನಂತರ ಹೆಚ್ಚು ವೇಗವಾಗಿ ಸಂಚರಿಸಿ ನಿಗದಿತ ಅವಧಿಯಲ್ಲಿ ಮುಂದಿನ ನಿಲ್ದಾಣ ತಲುಪಲು ಪ್ರಯತ್ನಿಸುತ್ತವೆ. ಇನ್ನು ಕೆಲವು ಬಸ್‌ಗಳು ಟ್ರಾಫಿಕ್‌ ಜಾಮ್‌ನ ಮಾಹಿತಿ ದೊರೆತ ಕೂಡಲೇ ತಮ್ಮ ಮಾರ್ಗ ಬದಲಾಯಿಸಿ ಪ್ರಯಾಣಿಕರನ್ನು ಅರ್ಧದಾರಿಯಲ್ಲಿ ಇಳಿಸಿ ಹೋಗುವುದೂ ಇದೆ. ಒಂದೇ ರೂಟಿನ ಬಸ್‌ಗಳ ನಡುವೆ ಪೈಪೋಟಿ ಏರ್ಪಟ್ಟರೆ ಅತೀ ವೇಗ, ನಿರ್ಲಕ್ಷ್ಯದ ಚಾಲನೆ ಆರಂಭವಾಗುತ್ತದೆ. ಇದೇ ಕಾರಣಕ್ಕೆ ಬಸ್‌ ಸಿಬಂದಿ ಹೊಡೆದಾಡಿಕೊಂಡ ಘಟನೆಯೂ ಇತ್ತೀಚೆಗೆ ನಗರದಲ್ಲಿ ನಡೆದಿತ್ತು.

Advertisement

 ಫ‌ುಟ್‌ಬೋರ್ಡ್‌ ಅವಾಂತರ

ಕೆಲವು ಬಸ್‌ಗಳ ಫ‌ುಟ್‌ಬೋರ್ಡ್‌ಗಳು ನಿಗದಿತ ಅಳತೆಗಿಂತ (ನೆಲದಿಂದ ಒಂದೂವರೆ ಅಡಿ)ಹೆಚ್ಚು ಎತ್ತರದಲ್ಲಿರುತ್ತವೆ. ಇದರಿಂದಾಗಿ ಹಿರಿಯ ನಾಗರಿಕರು, ಮಕ್ಕಳು ಪ್ರಯಾಸದಿಂದ ಬಸ್‌ ಹತ್ತುವ, ಇಳಿಯುವ ಅನಿವಾರ್ಯವಿದೆ. ಇದು ಕೂಡ ಕೆಲವೊಮ್ಮೆ ಅವಘಡಗಳಿಗೆ ಕಾರಣವಾಗುವ ಅಪಾಯವಿದೆ.

ಬಾಗಿಲು ಕಡ್ದಾಯಗೊಳಿಸಿ

ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಫ‌ುಟ್‌ಬೋರ್ಡ್‌ಗಳಿಗೆ ಬಾಗಿಲು ಕೂಡ ಕಡ್ಡಾಯಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್‌ ಆಗ್ರಹಿಸಿದ್ದಾರೆ.

ನಿಯಮ ಮೀರಿದರೆ ಕ್ರಮ

ನಗರ, ಹೊರವಲಯದಲ್ಲಿ 350 ಸಿಟಿ ಬಸ್‌ಗಳು, 150ಕ್ಕೂ ಅಧಿಕ ಸರ್ವಿಸ್‌ ಮತ್ತು ಕಾಂಟ್ರ್ಯಾಕ್ಟ್ ಕ್ಯಾರಿಯೇಜ್‌ ಬಸ್‌ಗಳಿವೆ. ತುರ್ತು ನಿರ್ಗಮನ ದ್ವಾರ ಬಹುತೇಕ ಎಲ್ಲ ಬಸ್‌ಗಳಲ್ಲಿಯೂ ಇವೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕೂಡ ಇಟ್ಟುಕೊಳ್ಳುವುದು ಕಡ್ಡಾಯ. ಈ ನಿಯಮಗಳನ್ನು ಉಲ್ಲಂಘಿಸುವ ಬಸ್‌ಗಳನ್ನು ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಎಫ್ಸಿ, ಫಿಟ್‌ನೆಸ್‌ ಪರೀಕ್ಷೆಗೆ ಬರುವಾಗ ಕೂಡ ತಪಾಸಣೆ ನಡೆಸಲಾಗುತ್ತಿದೆ. -ಆರ್‌.ಎಂ. ವರ್ಣೇಕರ್‌, ಪ್ರಾದೇಶಿಕ ಸಾರಿಗೆ ಆಯುಕ್ತರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next