ಮಾನ್ವಿ: ಕಳೆದ ಒಂದು ವರ್ಷದಿಂದ ಕೊರೊನಾ ಭೀತಿಯಿಂದಾಗಿ ಪಟ್ಟಣದ ಜನತೆ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಈ ಭಾರಿ ವಿವಿಧ ವಾರ್ಡ್‌ಗಳಿಗೆ ಮೂಲ
ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಹಿರಿಯ ಪುರಸಭೆ ಸದಸ್ಯ ರಾಜಾ ಮಹೇಂದ್ರ ನಾಯಕ ಸಲಹೆ ನೀಡಿದರು.
ಪಟ್ಟಣದ ಪುರಸಭೆಯಲ್ಲಿ ನಡೆದ 2020-21ನೇ ಸಾಲಿನ ಬಜೆಟ್ ಮಂಡನೆ ತಯಾರಿಗಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷದಿಂದ ಗೆದ್ದ ಸದಸ್ಯರಿಗೆ ಅಧಿ ಕಾರ ಇರಲಿಲ್ಲ ಮತ್ತು ಕೊರೊನಾ ಭೀತಿಯಿಂದಾಗಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಸೌಕರ್ಯಗಳನ್ನು ಒದಗಿಸಲು ಅಧಿಕ ಹಣ ಮೀಸಲಿಡಿ ಎಂದರು.
ನಗರೋತ್ಥಾನ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಬಸ್ ನಿಲ್ದಾಣದ ಹತ್ತಿರದ ಪುರಸಭೆ ಮಳಿಗೆಗಳಿಗೆ ಟೆಂಡರ್ ಕರೆಯಬೇಕು. ಪೌರ ಕಾರ್ಮಿಕರ ವೇತನ ಬಾಕಿ ಉಳಿಸದಂತೆ ಪ್ರತಿತಿಂಗಳು ನೀಡಬೇಕು. ಅಕ್ರಮ ನಳಗಳನ್ನು ಸಕ್ರಮ ಮಾಡಿ ಪುರಸಭೆ ಆದಾಯ ಹೆಚ್ಚಿಸಬೇಕು ಎಂದರು.
ನಂತರ ಚಂದ್ರು ಜಾನೇಕಲ್ ಮಾತನಾಡಿದರು. ಶರಣಪ್ಪಗೌಡ, ಹನುಮಂತ ಭೋವಿ ಮತ್ತು ಹುಸೇನ್ ಪಾಷಾ ಮಾತನಾಡಿದರು. ಪುರಸಭೆ ಮುಖ್ಯಾ ಧಿಕಾರಿ ಜಗದೀಶ್ ಮಾತನಾಡಿ, ಎಲ್ಲರ ಸಲಹೆಗಳನ್ನು ಬಜೆಟ್ ತಯಾರಿಕೆಯಲ್ಲಿ ಪರಿಗಣಿಸಲಾಗುವುದು ಎಂದರು. ಪುರಸಭೆ ಅಧ್ಯಕ್ಷೆ ಸೂಫಿಯಾ ಬೇಗಂ, ಉಪಾಧ್ಯಕ್ಷ ಕೆ.ಸುಖಮುನಿ, ಶಿವರಾಜ್ ನಾಯಕ, ಇಬ್ರಾಹಿಂ ಖುರೇಷಿ, ವೀರೇಶ , ಹುಸೇನೆ ಬಾಪಾ, ರೇವಣಸಿದ್ದಯ್ಯ, ಕೃಷ್ಣಮೂರ್ತಿ ಇದ್ದರು.