Advertisement

ಆರೋಗ್ಯ ಕ್ಷೇತ್ರ ಬಲವರ್ಧನೆಗೆ ಆದ್ಯತೆ ನೀಡಿ

06:29 PM Sep 30, 2020 | Suhan S |

ಬಳ್ಳಾರಿ: ಜಿಲ್ಲಾ ಖನಿಜ ನಿಧಿ(ಡಿಎಂಎಫ್‌)ಯಲ್ಲಿನ ಅನುದಾನ ಬಳಸಿಕೊಂಡು ಜಿಲ್ಲೆಯಲ್ಲಿನ ಆರೋಗ್ಯ ಕ್ಷೇತ್ರ ಬಲವರ್ಧನೆಗೆ ಆದ್ಯತೆ ನೀಡಬೇಕು ಮತ್ತು ಕೋವಿಡ್‌ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಉಳಿದ ಅನುದಾನದಲ್ಲಿ ಶಿಕ್ಷಣ ಸೇರಿ ಇತರೆ ಕ್ಷೇತ್ರಗಳತ್ತ ಗಮನ ಹರಿಸುವುದು ಸೂಕ್ತ ಎಂದು ಜಿಲ್ಲೆಯ ಶಾಸಕರೆಲ್ಲರೂ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ಸಭೆಯಲ್ಲಿ ಶಾಸಕರೆಲ್ಲರೂ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಇದಕ್ಕೆ ಸಭೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅವರು ಸಹ ಸಹಮತ ವ್ಯಕ್ತಪಡಿಸಿದರು. ಕೂಡಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸುಧಾರಣೆ ಹಾಗೂ ಬಲವರ್ಧನೆ, ಕೋವಿಡ್‌ ನಿಯಂತ್ರಣ ಹಾಗೂ ಚಿಕಿತ್ಸೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆಕ್ಸಿಜನ್‌ ಆಂಬ್ಯುಲೆನ್ಸ್‌, ವೆಂಟಿಲೇಟರ್‌ ಸೌಲಭ್ಯ ಹಾಗೂ ಇನ್ನಿತರ ಆರೋಗ್ಯ ಸಂಬಂ ತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಾರದೊಳಗೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಜಿಲ್ಲಾ ಧಿಕಾರಿ ಎಸ್‌.ಎಸ್‌.ನಕುಲ್‌ ಅವರಿಗೆ ಸೂಚಿಸಿದರು.

ಈ ಕ್ರಿಯಾಯೋಜನೆಗೆ ಆಗುವ ವೆಚ್ಚ ಹೊರತುಪಡಿಸಿ ಉಳಿದ ಅನುದಾನವನ್ನು ಶಿಕ್ಷಣ, ರಸ್ತೆ ನಿರ್ಮಾಣ, ಕುಡಿಯುವ ನೀರು ಹಾಗೂ ಇನ್ನಿತರೆ ಕ್ಷೇತ್ರಗಳಿಗೆ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿ, ಕೋವಿಡ್‌ ನಿಯಂತ್ರಿಸುವ ಹಾಗೂ ಇನ್ನಿತರೆ ವಿಷಯಗಳಲ್ಲಿ ಶಾಸಕರು ಯಾವ ರೀತಿಯ ಸಲಹೆಗಳನ್ನು ನೀಡುತ್ತಾರೋ ಅವುಗಳನ್ನು ಪರಿಗಣಿಸಿ ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ಅಸಹಾಯಕತೆ ತೋರಬಾರದು ಎಂದು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಗ್ರಾಮೀಣ ಶಾಸಕ ನಾಗೇಂದ್ರ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಕುರಿತು ಅಷ್ಟೊಂದು ಜಾಗೃತಿ ಇಲ್ಲ. ಜನರು ಬಹುತೇಕ ಮಾಸ್ಕ್ ಧರಿಸುತ್ತಿಲ್ಲ ಮತ್ತು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಜಾಗೃತಿ ಅವಶ್ಯಕತೆ ಇದ್ದು, ಅರಿವು ಮೂಡಿಸಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸ್ಪಂದಿಸಿದ ಉಸ್ತುವಾರಿ ಸಚಿವ ಆನಂದಸಿಂಗ್‌, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ರಿಮೋಟ್‌ ಏರಿಯಾಗಳಲ್ಲಿ ಕೋವಿಡ್‌ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ ಎಂದು ಸೂಚಿಸಿದರು.

Advertisement

ಶೇ. 80ರಷ್ಟು ಆಕ್ಸಿಜನ್‌ ಉತ್ಪಾದನೆ: ಬಳ್ಳಾರಿಯಲ್ಲಿ ಇಡೀ ರಾಜ್ಯಕ್ಕೆ ಬೇಕಾಗುವ ಶೇ. 80 ರಷ್ಟು ಆಕ್ಸಿಜನ್‌ ಇಲ್ಲಿಂದಲೇ ಸರಬರಾಜಾಗುತ್ತಿದೆ. ಯಾವುದೇ ರೀತಿಯ ಕೊರತೆ ನಮ್ಮಲ್ಲಿ ಇಲ್ಲ. ಕೋವಿಡ್‌ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆ ನಾನ್‌ ಕೋವಿಡ್‌ ಆಸ್ಪತ್ರೆಯನ್ನಾಗಿ ಇನ್ನು ಮುಂದೆ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾ ಧಿಕಾರಿ ಎಸ್‌.ಎಸ್‌. ನಕುಲ್‌ ಸಭೆಗೆ ತಿಳಿಸಿದರು.ಜಿಲ್ಲೆಯಲ್ಲಿ ಇದುವರೆಗೆ 31107 ಪ್ರಕರಣಗಳು ದೃಢಪಟ್ಟಿದ್ದು, ಸದ್ಯ 2559 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಕಳೆದ ಎರಡು ತಿಂಗಳ ಕೋವಿಡ್‌ ಪ್ರಮಾಣಕ್ಕೆ ಹೊಲಿಕೆ ಮಾಡಿ ನೋಡಿದರೇ ಈ ತಿಂಗಳ ಸೊಂಕಿತರ ಸಂಖ್ಯೆಯ ಪ್ರಮಾಣ ಇಳಿಕೆಯಾಗಿದೆ ಎಂದರು.

ಡಿಎಂಎಫ್‌ ವಾರ್ಷಿಕ ವರದಿ ಬಿಡುಗಡೆ: ಜಿಲ್ಲಾ ಖನಿಜ

ಪ್ರತಿಷ್ಠಾನ ಟ್ರಸ್ಟ್‌ಗೆ ಇಲ್ಲಿಯವರೆಗೆ ಜಮಾ ಆಗಿರುವ ಮೊತ್ತ ಮತ್ತು ಬಿಡುಗಡೆಯಾಗಿರುವ ಮೊತ್ತಕ್ಕೆ ಸಂಬಂಧಿಸಿದಂತೆ 2019-20ನೇ ಸಾಲಿಗಾಗಿ ಚಾರ್ಟೆಡ್‌ ಅಕೌಂಟೆಂಟ್‌ ಅವರಿಂದ ಲೆಕ್ಕ ಪರಿಶೋಧನೆಯನ್ನು ಮಾಡಿಸಲಾಗಿದೆ. 2019-20ನೇ ಸಾಲಿನಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳಿಗೆ ಸಂಬಂ ಧಿಸಿದಂತೆ ವಾರ್ಷಿಕ ಕಾರ್ಯನಿರ್ವಹಣೆ ವರದಿ ಸಿದ್ಧಪಡಿಸಲಾಗಿದೆ. ಈ ಲೆಕ್ಕ ಪರಿಶೋಧನಾ ವರದಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಹಾಗೂ 2019-20ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣೆ ವರದಿಯನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಅವರು ವಿವರಿಸಿದರು.

ಕಾರ್ಖಾನೆಗಳೊಂದಿಗೆ ಸಿಎಸ್‌ಆರ್‌ ಸಭೆ ನಡೆಸಿ: ಜಿಲ್ಲೆಯಲ್ಲಿ ಜಿಂದಾಲ್‌ ಸೇರಿದಂತೆ ಅನೇಕ ಕಾರ್ಖಾನೆಗಳಿದ್ದು, ಅವುಗಳು ಸಿಎಸ್‌ಆರ್‌ ಅಡಿ ಶೇ. 2ರಷ್ಟು ತಮ್ಮ ಆದಾಯದಲ್ಲಿನ ಹಣ ಖರ್ಚು ಮಾಡಿರುವುದಕ್ಕೆ ಸಂಬಂಧಿ ಸಿದಂತೆ ಎಲ್ಲ ಕಾರ್ಖಾನೆಗಳೊಂದಿಗೆ ಜಿಲ್ಲಾಡಳಿತವು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದು ಶಾಸಕರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆನಂದಸಿಂಗ್‌ ಅವರು, ಶಾಸಕರು ಕೇಳುತ್ತಿರುವುದು ನ್ಯಾಯಸಮ್ಮತವಾಗಿದ್ದು, ಕೂಡಲೇ ಎಲ್ಲ ಕಾರ್ಖಾನೆಗಳಿಗೆ ನೋಟಿಸ್‌ ಜಾರಿ ಮಾಡಿ ಮತ್ತು ಸಭೆಗೆ ದಿನಾಂಕ ನಿಗದಿಪಡಿಸಬೇಕು ಎಂದು ಜಿಲ್ಲಾ ಧಿಕಾರಿಗಳಿಗೆ ಸೂಚಿಸಿದರು. ಡಿಎಂಎಫ್‌ ಅಡಿ ಇದುವರೆಗೆ ಕೈಗೊಂಡ ಕಾಮಗಾರಿಗಳು ಮತ್ತು ಫಲಿತಾಂಶ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಸಂಸದ ವೈ. ದೇವೇಂದ್ರಪ್ಪ, ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಶಾಸಕರಾದ ಪಿ.ಟಿ. ಪರಮೇಶ್ವರ ನಾಯಕ್‌, ಈ. ತುಕಾರಾಂ, ಕರುಣಾಕರ ರೆಡ್ಡಿ, ಸೋಮಶೇಖರ್‌ ರೆಡ್ಡಿ, ಸೋಮಲಿಂಗಪ್ಪ, ಬಿ.ನಾಗೇಂದ್ರ, ಗಣೇಶ, ಭೀಮಾನಾಯಕ್‌, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿಪಂ ಸಿಇಒ ಕೆ.ಆರ್‌.ನಂದಿನಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next