ಪಿರಿಯಾಪಟ್ಟಣ: ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಅಭಿವದ್ಧಿ ಸಾಧ್ಯವೆನ್ನುವ ಉದ್ದೇಶದಿಂದ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿ ಆದ್ಯತೆ ನೀಡಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣ ಟೌನ್ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲಾ ಆವರಣದಲ್ಲಿ ಶನಿವಾರ ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ 21 ಉರ್ದು ಶಾಲೆಗಳಿದ್ದು ಅವುಗಳಿಗೆ ಸಮರ್ಪಕವಾದ ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕೊಳವೆ ಬಾವಿ ಹಾಗೂ ಉತ್ತಮ ಶೌಚಾಲಯಗಳ ನಿರ್ಮಾಣಕ್ಕಾಗಿ ಸರ್ಕಾದಿಂದ ಹೆಚ್ಚು ಅನುದಾನ ತರಲು ಪ್ರಯತ್ನಿಸುತ್ತೇನೆಂದರು. ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣ ಅತ್ಯವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಅತ್ಯವಶ್ಯಕವಾಗಿದೆ. ಮುಸ್ಲಿಂ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಮೌಲಾನ ಆಜಾದ್ ಶಾಲೆಗಳು ಸೇರಿದಂತೆ ವಸತಿ ಸೌಲಭ್ಯದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾಸಿರಿ ಯೋಜನೆ ಜಾರಿಗೆ ತಂದಿದೆ. ಅಲ್ಲದೇ ಹೋಬಳಿಗೊಂದು ವಸತಿ ಶಾಲೆ ಪ್ರಾರಂಭಿಸಲು ಸರಕಾರ ಚಿಂತನೆ ನಡೆಸಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ ಕುಮಾರ್, ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಪಿ.ಸಿ.ಕೃಷ್ಣ, ನಿರಂಜನ್, ಶ್ವೇತಾ ಕುಮಾರ್, ಪುಷ್ಪಲತಾ, ಪ್ರಕಾಶ್ ಸಿಂಗ್ ಸೇರಿದಂತೆ ಮತ್ತಿತರರು ಹಾಜರಿದ್ದರು.